ಶ್ರೀಮಂಗಲ, ಆ. 7: ಶ್ರೀಮಂಗಲ ಪಟ್ಟಣದಲ್ಲಿ ಹುಚ್ಚುನಾಯಿಗಳ ಹಾವಳಿ ಕಂಡುಬಂದಿದ್ದು, ಸಂತೆ ದಿನವಾದ ಸೋಮವಾರ ಬೆಳಗ್ಗೆ ಪಟ್ಟಣದಲ್ಲಿ ಹುಚ್ಚುನಾಯಿ ಇಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ. ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಅವರು ಪಟ್ಟಣದ ತಮ್ಮ ವ್ಯಾಪಾರ ಮಳಿಗೆಗೆ ಕಾರು ನಿಲ್ಲಿಸಿ ತೆರಳುತ್ತಿದ್ದ ವೇಳೆ ಅವರ ಕಾಲಿಗೆ ಕಚ್ಚಿರುವ ಹುಚ್ಚುನಾಯಿ ನಂತರ ಅಲ್ಲಿಂದ ದಿಢೀರನೆ ಅಡ್ಡಾದಿಡ್ಡಿ ಓಡಾಡಿದೆ. ಈ ನಾಯಿ ಬೇರೆಯವರಿಗೆ ಕಚ್ಚಲು ಮುಂದಾಗುತ್ತಿದ್ದ ವೇಳೆ ಸಮೀಪದಲ್ಲೇ ವ್ಯಾಪಾರ ಮಳಿಗೆ ಇಟ್ಟುಕೊಂಡಿರುವ ರಾಜೇಶ್ ಎಂಬವರು ಬೈಕಿನಿಂದ ಇಳಿಯುತ್ತಾ ನಾಯಿಯನ್ನು ಓಡಿಸಲು ಪ್ರಯತ್ನಿಸುತ್ತಿದ್ದಂತೆ ಅವರ ಕಾಲಿಗೂ ಕಚ್ಚಿ ಆಳವಾದ ಗಾಯ ಮಾಡಿದೆ.ಗಾಯಾಳುಗಳಿಗೆ ಶ್ರೀಮಂಗಲ ಕರುಣಾ ಟ್ರಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಗ್ರಾ.ಪಂ.ನಿಂದ ಹುಚ್ಚುನಾಯಿ ಹಾವಳಿ ಹತ್ತಿಕ್ಕಲು ಕೂಡಲೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಸಂಚರಿಸುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಹುಚ್ಚುನಾಯಿ ಬೇರೆ ಬೀದಿ ನಾಯಿಗಳಿಗೆ ಕಚ್ಚಿದ್ದರೆ ಅವುಗಳಿಗೂ ದುಷ್ಪರಿಣಾಮ ಬೀರುವದರಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು.