ಮಡಿಕೇರಿ, ಆ. 7: ಶಾಲಾಭಿವೃದ್ಧಿ ಸಮಿತಿ ಸಮನ್ವಯ ವೇದಿಕೆ ವತಿಯಿಂದ ಶಿಕ್ಷಕರಿಗೆ ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳಿಗೆ ಸರ್ಕಾರಿ ಶಾಲೆಗಳ ಸಬಲೀಕರಣದತ್ತ ಶಾಲಾಭಿವೃದ್ಧಿ ಸಮಿತಿಯ ಪಾತ್ರ ವಿಷಯದ ಕುರಿತು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.

ರಾಜ್ಯ ಶಿಕ್ಷಣ ತಜ್ಞ ಡಾ. ನಿರಂಜನ್ ಆರಾಧ್ಯ ಮಾತನಾಡಿ, ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡದೆ, ಖಾಸಗಿ ಶಾಲೆಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಿದೆ.

ಇಂದು ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಾಠಪ್ರವಚನ ಮಾಡಲು ಶಿಕ್ಷಕರು ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಾದರೂ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕನನ್ನು ನೇಮಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.

ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಮಾತನಾಡಿ, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಎಸ್‍ಡಿಎಂಸಿ ಯ ಎಲ್ಲಾ ಪದಾಧಿಕಾರಿಗಳು ಶ್ರಮಿಸಬೇಕು ಎಂದರು. ಎಸ್‍ಡಿಎಂಸಿಯ ಜಿಲ್ಲಾಧ್ಯಕ್ಷ ಕೆ.ಎ.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಗಾಯತ್ರಿ, ಸಿದ್ದಲಿಂಗಪ್ಪ, ನ್ಯಾನ್ಸಿ, ಜನಾರ್ಧನ, ರೇವತಿ, ಉಮಾ ಮಂಜುನಾಥ್ ಸೇರಿದಂತೆ ಜಿಲ್ಲೆಯ ಎಲ್ಲಾ ಎಸ್‍ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.