ಸೋಮವಾರಪೇಟೆ, ಆ. 7: ಕರ್ನಾಟಕ ಜಾನಪದ ಪರಿಷತ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಆಶ್ರಯದಲ್ಲಿ ಸ್ಥಳೀಯ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಕವಿಗೋಷ್ಠಿಯಲ್ಲಿ ಸುಮಾರು 30 ವಿದ್ಯಾರ್ಥಿಗಳು ಕವನ ವಾಚಿಸಿ ತಮ್ಮ ಸಾಹಿತ್ಯಾಸಕ್ತಿಯನ್ನು ತೋರ್ಪಡಿಸಿದರು.

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ವಿವಿಧ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಎಳೆಯ ಕವಿಗಳು ತಮ್ಮ ಕವನಗಳಲ್ಲಿ ಯೋಧರ ತ್ಯಾಗ ಬಲಿದಾನ, ಪರಿಸರ ಸಂರಕ್ಷಣೆ, ವಿದ್ಯಾಭ್ಯಾಸ, ಗೆಳೆತನ, ಬದಲಾಗುತ್ತಿರುವ ಮಕ್ಕಳ ಬದುಕು ಇತ್ಯಾದಿ ವಿಷಯಗಳ ಮೇಲೆ ಕವನ ರಚಿಸಿ ವಾಚಿಸುವ ಮೂಲಕ ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿದರು.

ಕೆಲ ವಿದ್ಯಾರ್ಥಿಗಳಿಗೆ ಸಭಾ ಕಂಪನ ಆವರಿಸಿದರೂ ಸಹ ಅದನ್ನೂ ಮೀರಿ ಕವನ ವಾಚಿಸುತ್ತಿದ್ದುದು ಕೇಳುಗರ ಮೊಗದಲ್ಲಿ ನಗುತರಿಸುತ್ತಿತ್ತು. ಬಹುತೇಕ ವಿದ್ಯಾರ್ಥಿಗಳು ಹಿರಿಯ ಕವಿಗಳಷ್ಟೇ ಕರಾರುವಾಕ್ ಆಗಿ ಕವನ ವಾಚಿಸುವ ಮೂಲಕ ಗಮನಸೆಳೆದರು.

ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಆಯೋಜಿಸಲಾಗಿದ್ದು, ಸಾಹಿತ್ಯ, ಜನಪದ ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಸುದರ್ಶನ್ ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಜಾನಪದ ಪರಿಷತ್‍ನ ವೀರಾಜಪೇಟೆ ತಾಲೂಕು ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಹೆಚ್.ಟಿ. ಅನಿಲ್, ಜಿಲ್ಲಾ ಉಪಾಧ್ಯಕ್ಷರುಗಳಾದ ಐಮುಡಿಯಂಡ ರಾಣಿ ಮಾಚಯ್ಯ, ಕುಶಾಲಪ್ಪ, ಹೋಬಳಿ ಘಟಕದ ಉಪಾಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಅವರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಆಯೋಜಿಸಲಾಗಿದ್ದ ಜಾನಪದ ಗೀತೆಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪುರುಷೋತ್ತಮ್, ದ್ವಿತೀಯ ಸ್ಥಾನ ಪಡೆದ ಗಂಧರ್ವ ಪ್ರವೀಣ್, ತೃತೀಯ ಸ್ಥಾನ ಪಡೆದ ಪ್ರದೀಪ್, ನಾಲ್ಕು ಮತ್ತು ಐದನೇ ಸ್ಥಾನ ಪಡೆದ ದಿವ್ಯಾ ಮತ್ತು ಹೆಚ್.ಕೆ. ಮಹೇಶ್ ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ತಾಲೂಕು ಅಧ್ಯಕ್ಷ ಚಂದ್ರಮೋಹನ್, ಹೋಬಳಿ ಅಧ್ಯಕ್ಷ ಮುರಳೀಧರ್, ಉಪಾಧ್ಯಕ್ಷ ನ.ಲ. ವಿಜಯ, ಕಾರ್ಯದರ್ಶಿ ರುಬೀನಾ ಸೇರಿದಂತೆ ಇತರರು ಭಾಗವಹಿಸಿದ್ದರು.