*ಗೋಣಿಕೊಪ್ಪಲು, ಆ. 8 : ಪೊಲೀಸ್ ಇಲಾಖೆ ವಿನೂತನವಾಗಿ ಜಾರಿಗೆ ತಂದ ಬೀಟ್ ಪೊಲೀಸ್ ವ್ಯವಸ್ಥೆಯಲ್ಲಿ ಬ್ಯಾಡ್ಜ್ ಪಡೆದ ಸದಸ್ಯರು ಗಳಿಂದ ದಬ್ಬಾಳಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಿತಿಮೀರಿದ ಅಧಿಕಾರ ಚಲಾಯಿಸಲು ಬ್ಯಾಡ್ಜ್ ಪಡೆದುಕೊಂಡವರು ಮುಂದಾಗಿದ್ದಾರೆ. ತಮ್ಮ ವ್ಯಾಪ್ತಿಯ ಬಡವಾಣೆಗಳಿಗೆ ಯುವಕರು ಬರಬಾರದು ಎಂದು ಎಚ್ಚರಿಕೆ ನೀಡಲು ಮುಂದಾಗಿರುವ ಆರೋಪಗಳಿವೆ.

ಗೋಣಿಕೊಪ್ಪ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಪೊಲೀಸ್ ಇಲಾಖೆ ಯಿಂದ ಗ್ರಾಮ ಗಸ್ತು ಸುಧಾರಿತ ವ್ಯವಸ್ಥೆಯ ಸದಸ್ಯತ್ವ ನೊಂದಣಿಯಾದ ಇಬ್ಬರ ವರ್ತನೆ ಕಾಲೇಜು ವಿದ್ಯಾರ್ಥಿ ಗಳಲ್ಲಿ ಆಕ್ರೋಶಕ್ಕೆ ಎಡೆ ಮಾಡಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಕಾವೇರಿ ಹಿಲ್ಸ್ ಬಡಾವಣೆಗೆ ಪ್ರವೇಶಿಸಲು ನಿಷೇಧ ಹೇರುವ ಇವರು ಯುವಕರನ್ನು ಕಂಡರೆ ತಡೆದು ಅವರ ವಾಹನಗಳಿಗೆ ಬೆಂಕಿ ಇಡುವದಾಗಿ ಬೆದರಿಕೆ ಒಡ್ಡುತ್ತಾರೆ. ಅಲ್ಲದೇ ಏಕಾಏಕಿ ವ್ಯಕ್ತಿಯ ಮೇಲೆ ಹಲ್ಲೆಗೂ ಪ್ರಯತ್ನಿ ಸುತ್ತಿದ್ದಾರೆ ಎಂದು ಕಾವೇರಿ ಪದವಿ ಪೂರ್ವ ಕಾಲೇಜಿನ ಎ.ಬಿ.ವಿ.ಪಿ. ಘಟಕದ ವಿದ್ಯಾರ್ಥಿಗಳು ಆರೋಪಿ ಸಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ಆಗಸ್ಟ್ 6 ರಂದು ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಸ್ನೇಹಿತರು ಹಾಗೂ ಬಂಧುಗಳು ಈ ಬಡಾವಣೆ ಯಲ್ಲಿ ಇರುವದರಿಂದ ಪಂದ್ಯ ವೀಕ್ಷಿಸಲು ಬಡಾವಣೆಯ ಒಳಗೆ ಪ್ರವೇಶಿಸಿದಾಗ ತಡೆದ ಈರ್ವರು ಬೆದರಿಸಿ ಇಲ್ಲದ ಆರೋಪಗಳನ್ನು ಹೊರಿಸಿ ತನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಮತ್ತೆ ಈ ಭಾಗದಲ್ಲಿ ಕಾಣಿಸಿಕೊಂಡರೆ ಹುಡುಗಿಯನ್ನು ಚುಡಾಯಿಸಲು ಬಂದಿರುವದಾಗಿ ಆರೋಪಿಸಿ ದೂರು ದಾಖಲಿಸುವದಾಗಿ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ವಿಚಾರಿಸಿದ ತÀನ್ನ ಪೋಷಕರನ್ನು ಸಹ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿ ದೂರಿನಲ್ಲಿ ದಾಖಲಿಸಿದ್ದಾನೆ.