ಕುಶಾಲನಗರ, ಆ. 8: ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ರೈತ ಪ್ರತಿನಿಧಿಗಳು ಕಾವೇರಿ ನೀರಾವರಿ ನಿಗಮದ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ ನೇತೃತ್ವದಲ್ಲಿ ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಕಛೇರಿ ಮುಂಭಾಗದಲ್ಲಿ ರೈತರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಹಾರಂಗಿ ಜಲಾಶಯ ಭರ್ತಿಯಾಗಿ ತಿಂಗಳು ಕಳೆದರೂ ಕಾಲುವೆಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾಲುವೆಗಳ ಮೂಲಕ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ನೀರು ಬಳಕೆದಾರರ ಮಹಾಮಂಡಳದ ಉಪಾಧ್ಯಕ್ಷ ಎಂ.ದೇವರಾಜು, ಕಾರ್ಯದರ್ಶಿ ಚಂದ್ರಪ್ಪ, ಕಾವೇರಿ ಜಲಾನಯನ ಪ್ರದೇಶದ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಇದ್ದರು.

ಹಾರಂಗಿ ಜಲಾಶಯ ಯೋಜನೆ ಅಧೀಕ್ಷಕ ಅಭಿಯಂತರ ಈ ಸಂದರ್ಭ ಮಾತನಾಡಿ, ತಾ. 14 ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು ಮನವಿ ಪತ್ರವನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಡಲಾಗುವದು ಎಂದು ತಿಳಿಸಿದರು.