ಕುಶಾಲನಗರ, ಆ. 9: ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ವಿಷಯದಲ್ಲಿ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯ ಉತ್ತಮ ಪಡಿಸಲು ಭಾನುವಾರದಂದು ತಾಲೂಕು ಮಟ್ಟದಲ್ಲಿ ವಿಶೇಷ ತರಗತಿಗಳನ್ನು ನಡೆಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶ ಬಹುತೇಕ ಅವೈಜ್ಞಾನಿಕವಾಗಿದೆ ಎಂದು ಕೊಡಗು ಜಿಲ್ಲಾ ಆಂಗ್ಲ ಭಾಷಾ ಉಪನ್ಯಾಸಕ ವೇದಿಕೆ ಹಾಗೂ ಉಪನ್ಯಾಸಕ ಪರಿಷತ್ ತಿಳಿಸಿದೆ.

ರಾಜ್ಯದಾದ್ಯಂತ ಪಿಯು ವಿದ್ಯಾರ್ಥಿಗಳಿಗೆ ಭಾನುವಾರ ವಿಶೇಷ ತರಗತಿಗಳನ್ನು ತಾಲೂಕು ಕೇಂದ್ರಗಳಲ್ಲಿ ನಡೆಸುವ ಯೋಜನೆ ಇದಾಗಿದ್ದು ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾದ ಕಾರಣ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಲಿದೆ ಎಂದು ವೇದಿಕೆ ಮತ್ತು ಪರಿಷತ್ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ವೇದಿಕೆ ಮತ್ತು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಫಿಲಿಪ್‍ವಾಸ್, ಈ ಹೊಸ ಯೋಜನೆಯಿಂದ ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಲಿದೆ. ತಾಲೂಕು ಕೇಂದ್ರಗಳಿಗೆ ತೆರಳುವ ಸಾವಿರಾರು ಮಕ್ಕಳಿಗೆ ಪ್ರಯಾಣದ ಸಂದರ್ಭ ತೊಂದರೆ ಹಾಗೂ ಇನ್ನೊಂದೆಡೆ ಆಂಗ್ಲ ಮಾಧ್ಯಮದ ಉಪನ್ಯಾಸಕರ ಕೊರತೆ ಕೂಡ ಇರುವದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಾಲೂಕು ಕೇಂದ್ರಗಳಿಗೆ ತೆರಳಲು ಖಾಸಗಿ ಬಸ್‍ಗಳ ಮೊರೆ ಹೋಗಬೇಕಾಗಿದ್ದು ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಇರುವದಿಲ್ಲ. ಜಿಲ್ಲೆಯ ಅರಣ್ಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಾಡು ಪ್ರಾಣಿಗಳ ಉಪಟಳ ಹಾಗೂ ದೂರದ ಊರಿಗೆ ತೆರಳಲು ತೊಂದರೆ ಉಂಟಾಗುತ್ತದೆ ಎಂದು ಈಗಾಗಲೇ ಪೋಷಕರು ದೂರಿದ್ದಾರೆ ಎಂದು ತಿಳಿಸಿದ್ದಾರೆ.

ಕಾಲೇಜು ಆವರಣದಲ್ಲಿ ಹೆಚ್ಚುವರಿ ಅವಧಿಯಲ್ಲಿ ಈ ಯೋಜನೆ ಕಲ್ಪಿಸಲು ಅವಕಾಶ ನೀಡಿದಲ್ಲಿ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಿಗೂ ಈ ಬಗ್ಗೆ ಮನವಿ ಪತ್ರ ಸಲ್ಲಿಸಲಾಗಿದ್ದು ಸರಕಾರದ ಗಮನ ಸೆಳೆಯುವಂತೆ ಫಿಲಿಪ್‍ವಾಸ್ ಕೋರಿದ್ದಾರೆ.