ಭಗಮಂಡಲ/ಕರಿಕೆ, ಆ. 8: ಹೆದ್ದಾರಿಗಳಲ್ಲಿ ಸಂಭವಿಸುವ ವಾಹನ ಅಪಘತಗಳಲ್ಲಿ ಬಹುಪಾಲು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವದರಿಂದಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸರ್ವೋಚ್ಚ ನ್ಯಾಯಾಲಯ ಹೆದ್ದಾರಿ ಬದಿಯ 520 ಮೀ. ಅಂತರದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಮದ್ಯದಂಗಡಿ ಬಾರ್‍ಗಳಿಗೆ ಬೀಗ ಜಡಿಯಲಾಗಿದೆ. ಅಂಗಡಿಗಳನ್ನು 520 ಮೀ. ಅಂತರಕ್ಕೆ ಸ್ಥಳಾಂತರಿಸಲು 3 ತಿಂಗಳ ಕಾಲಾವಕಾಶ ಕೂಡ ನೀಡಲಾಗಿದೆ. ಈಗ ಎಲ್ಲರಲ್ಲೂ ಸ್ಥಳಾಂತರಕ್ಕೆ ಜಾಗ ಹುಡುಕುವ ಕಾಯಕವಾಗಿದ್ದರೆ, ಕೊಡಗು-ಕೇರಳ ಅಂತರ್ರಾಜ್ಯ ಗಡಿ ಪ್ರದೇಶದಲ್ಲಿ ಮಾತ್ರ ಮದ್ಯದಂಗಡಿಗಳು ಯಾವದೇ ಎಗ್ಗಿಲ್ಲದೆ ರಾಜಾರೋಷವಾಗಿ ವಹಿವಾಟು ನಡೆಸುತ್ತಿವೆ. ಅಬಕಾರಿ ಇಲಾಖೆಯ ‘ಅಭಯ ಹಸ್ತ’ದ ನೆರಳಿನಲ್ಲಿ ಬಾರ್‍ಗೆ ಹಿಂಬದಿಗಾಗಿ ಸುತ್ತಿ ಬಳಸಿ 520 ಮೀ. ಅಂತರದ ರಸ್ತೆ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ಗಡಿ ಗ್ರಾಮ ಕರಿಕೆಯಲ್ಲಿ 3 ಬಾರ್‍ಗಳಿದ್ದವು. ಬಲು ಜೋರು ವ್ಯಾಪಾರವೂ ಇದ್ದಿತು. ಇದೀಗ ನ್ಯಾಯಾಲಯದ ಆದೇಶದ ಹಿನ್ನೆಲೆ ಎರಡು ಬಾರ್‍ಗಳು ಮುಚ್ಚಿವೆ. ಆದರೆ ಇನ್ನೊಂದು ‘ಫ್ಯಾಮಿಲಿ ರೆಸ್ಟೋರೆಂಟ್’

(ಮೊದಲ ಪುಟದಿಂದ) ಎಂಬ ಫಲಕ ಇರುವದರಿಂದ ಹಾಗೇ ಇದೆ. ನಿಯಮಾನುಸಾರ ಇಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಆದರೆ ರಾಜಾರೋಷವಾಗಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಈ ಬಾರ್ ತೆರೆದಿರುತ್ತದೆ. ಕೌಂಟರ್‍ನಲ್ಲೇ ‘ಕುಡುಕರು’ ಕಂಠಪೂರ್ತಿ ಕುಡಿದು ತೆರಳುತ್ತಿರುವದು ಸಾಮಾನ್ಯವಾಗಿದೆ.

2 ಲಕ್ಷದ ವ್ಯಾಪಾರ!

ಅಚ್ಚರಿಯೆಂದರೆ ಇಲ್ಲಿ ಪ್ರತಿನಿತ್ಯ ಅಂದಾಜು ರೂ. 2 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗುತ್ತದೆ. ನೆರೆಯ ಕೇರಳ ರಾಜ್ಯದಲ್ಲಿ ಮದ್ಯ ಮಾರಾಟ ಇಲ್ಲವಾದ್ದರಿಂದ ಕೇರಳದಿಂದ ಹೆಚ್ಚಿನ ಮಂದಿ ಆಗಮಿಸುತ್ತಿರುವದು ಮಾಮೂಲಿಯಾಗಿದೆ. ಇಲ್ಲಿ ಮದ್ಯ ಸೇವನೆ ಮಾಡಿ ‘ಪಾರ್ಸಲ್’ ಕೂಡ ಹೋಗುತ್ತಿದ್ದು, ವ್ಯಾಪಾರ ಭಾರೀ ಭರ್ಜರಿಯಾಗಿದೆ.

ಮಾರುದ್ದ ರಸ್ತೆ...!

ಈ ಬಾರ್ ಹೆದ್ದಾರಿ ಬದಿಯಲ್ಲೇ ಇದೆ. ಆದರೆ ನ್ಯಾಯಾಲಯದ ಆದೇಶದಂತೆ 520 ಮೀ. ವಿಸ್ತರಿಸಬೇಕಾದ ಹಿನ್ನೆಲೆಯಲ್ಲಿ ಅನತಿ ದೂರದಿಂದ ಹಿಂಬದಿಗಾಗಿ ಮಣ್ಣು ಕೊರೆದು ಸುತ್ತಿ ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಬಾರ್, ಬಾಗಿಲು, ಕೌಂಟರ್‍ಗಳಲ್ಲಿ ಯಾವದೇ ಬದಲಾವಣೆಯಿಲ್ಲ.

ಅಬಕಾರಿ ಇಲಾಖೆ ಅಧಿಕಾರಿಗಳ ಬೆಂಬಲದೊಂದಿಗೆ ಈ ವಹಿವಾಟು ನಡೆಯುತ್ತಿದೆ ‘ಮದ್ಯ’ದ ಮನೆ...!

ಅತ್ತ ಬಾರ್‍ಗಳು ಮುಚ್ಚಿರುವದರಿಂದ ಇನ್ನೊಂದು ಅಂಗಡಿ ಸದ್ದಿಲ್ಲದೆ ತೋಟದ ಮಧ್ಯದಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದೆ. ಇದಕ್ಕೆ ಯಾವದೇ ಅನುಮತಿಯೂ ಇಲ್ಲ. ಇನ್ನೊಂದು ವಿಶೇಷವೆಂದರೆ 60 ರೂಪಾಯಿ ಬೆಲೆ ಬಾಳುವ ಮದ್ಯದ ಸ್ಯಾಚೆಟ್‍ಗಳು ಇಲ್ಲಿ ನೂರು ರೂಪಾಯಿಗೆ ಬಿಕರಿಯಾಗುತ್ತಿದೆ. ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದ್ದು, ಇಲ್ಲಿ ಪ್ರತಿನಿತ್ಯ ಅಂದಾಜು ರೂ. 10 ಲಕ್ಷದಷ್ಟು ವಹಿವಾಟು ನಡೆಯುತ್ತಿದೆ. ಸುಮಾರು 40 ಕಿ.ಮೀ. ದೂರದಿಂದ ಇಲ್ಲಿಗೆ ಪಾನಪ್ರಿಯರು ಬರುತ್ತಾರೆ. ಕೇರಳದವರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಸ್ಥಳೀಯರಿಗೆ ಕಿರಿಕಿರಿ

ಸನಿಹದಲ್ಲೆಲ್ಲೂ ಮದ್ಯ ಸಿಗದ ಕಾರಣ ಈ ಮದ್ಯದಂಗಡಿಗಳಿಗೆ ಆಗಮಿಸುವ ಪಾನಪ್ರಿಯರು ಮೂಗಿನಮಟ್ಟ ಕುಡಿದು ರಸ್ತೆ ಬದಿಯಲ್ಲಿ ತೂರಾಡುತ್ತ ಅಲ್ಲಿ ಇಲ್ಲಿ ಬೀಳುತ್ತಾ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಕಿರಿಕಿರಿ ಉಂಟು ಮಾಡುವದು ಸಾಮಾನ್ಯವಾಗಿದೆ.

ಇದಲ್ಲದೆ ಪಾನಪ್ರಿಯರು ವಾಹನಗಳಲ್ಲಿ ಆಗಮಿಸುವದರಿಂದ ಇಲ್ಲಿ ಎಲ್ಲಿಯೂ ನಿಲುಗಡೆಗೆ ಯಾವದೇ ಸ್ಥಳಾವಕಾಶ ಕೂಡ ಇಲ್ಲದ್ದರಿಂದ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುವಂತಾಗಿದೆ. ಇದರಿಂದ ಪ್ರತಿನಿತ್ಯ ಇಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ವಾಹನ ಸವಾರರು ಪ್ರಯಾಸದಿಂದಲೇ ಸಾಗಬೇಕಾಗಿದೆ. ಪ್ರತಿನಿತ್ಯ 500 ರಿಂದ 600 ಮಂದಿ ‘ಕುಡಿಯಲೋಸುಗÀÀ’ ಇಲ್ಲಿಗೆ ಬರುತ್ತಾರೆ.

ಭಾರೀ ಡೀಲ್...!

ಅಬಕಾರಿ ಇಲಾಖೆಯ ಮೇಲಧಿಕಾರಿಗಳ ಅಭಯಹಸ್ತದೊಂದಿಗೆ ಈ ಅಕ್ರಮ ವಹಿವಾಟು ಇಲ್ಲಿ ನಡೆಯುತ್ತಿದೆ. ಬಾರ್‍ಗೆ ಸುತ್ತಿ-ಬಳಸಿ ರಸ್ತೆ ನಿರ್ಮಿಸುವ ಮಹತ್ಕಾರ್ಯಕ್ಕೆ ಅಧಿಕಾರಿಗಳೊಂದಿಗೆ ಸುಮಾರು 30 ಲಕ್ಷದಷ್ಟು ಮೊತ್ತದ ಡೀಲ್ ಕುದುರಿದೆ ಎಂಬ ಮಾತು ಕೇಳಿ ಬರುತ್ತಿದೆ.

ಹೊರ ಜಿಲ್ಲೆಯವರ ಹೆಸರಿನಲ್ಲಿ ಪರವಾನಗಿ ಹೊಂದಿರುವ ಈ ಬಾರ್ ಅನ್ನು ಕೇರಳದ ವ್ಯಕ್ತಿಯೋರ್ವರು ಭೋಗ್ಯಕ್ಕೆ ಪಡೆದು ನಡೆಸುತ್ತಿದ್ದು, ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಆದಾಯ ಗಳಿಸುವಂತಾಗಿದೆ. ಆದರೆ ಗ್ರಾಮ ಪಂಚಾಯಿತಿಗೆ ಮಾತ್ರ ಕವಡೆ ಕಾಸು ಕೂಡ ಇಲ್ಲವಾಗಿದೆ.

ಗ್ರಾಮಸ್ಥರ ವಿರೋಧ

ಕರಿಕೆಯಲ್ಲಿ ಈ ರೀತಿ ಅಕ್ರಮವಾಗಿ ವಹಿವಾಟು ನಡೆಸಲು ಗ್ರಾಮಸ್ಥರೂ, ಮಹಿಳಾ ಸಂಘದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವದೇ ಕಾರಣಕ್ಕೂ ಹಿಂಬದಿಯಿಂದ ರಸ್ತೆ ನಿರ್ಮಿಸಿ, ಬಾರ್ ತೆರೆಯಲು ಅನುಮತಿ ನೀಡಬಾರದೆಂದು ಆಗ್ರಹಿಸಿದ್ದಾರೆ. ಅನುಮತಿ ನೀಡಿದಲ್ಲಿ ಗ್ರಾ.ಪಂ. ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಸಭೆ ನಡೆಸಿದ ಗ್ರಾ.ಪಂ. ಆಡಳಿತ, ಇನ್ನು ಮುಂದಕ್ಕೆ ಯಾವದೇ ಬಾರ್‍ಗಳಿಗೆ ಅನುಮತಿ ನೀಡದಂತೆ ತೀರ್ಮಾನ ಕೈಗೊಂಡಿದೆ.

ಆದರೆ ಈಗ ಹೆದ್ದಾರಿಯಲ್ಲೇ ಇರುವ ಬಾರ್‍ನ ಚಟುವಟಿಕೆ ಯಾವದೇ ಚಕಾರವೆತ್ತದಿರುವದು ವಿಪರ್ಯಾಸವೇ ಸರಿ. ಜಿಲ್ಲಾಡಳಿತವಾದರೂ ಇತ್ತ ಗಮನ ಹರಿಸಿ ಅಕ್ರಮ ವಹಿವಾಟು ಹಾಗೂ ಗ್ರಾಮದಲ್ಲಿ ಕಂಡುಬರುತ್ತಿರುವ ಅಶಾಂತಿಯ ವಾತಾವರಣವನ್ನು ತಿಳಿಯಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂಬದು ಗ್ರಾಮಸ್ಥರ ಕಳಕಳಿಯಾಗಿದೆ..!