ಸೋಮವಾರಪೇಟೆ,ಆ.8: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕುಮಾರಳ್ಳಿ ಗ್ರಾಮ, ಅರಣ್ಯ ಮತ್ತು ಕೊತ್ತನಳ್ಳಿ ಗ್ರಾಮಗಳನ್ನು ಸೂಕ್ಷ್ಮ ಪರಿಸರ ತಾಣ ವ್ಯಾಪ್ತಿಗೆ ಒಳಪಡಿಸುವ ಸಂಬಂಧ ಸರ್ಕಾರದಿಂದ ಗೆಜೆಟ್ ನೋಟಿಫಿಕೇಷನ್ ಬಂದಿದ್ದು, ಇದರ ವಿರುದ್ಧ ಸಿಟ್ಟಿಗೆದ್ದ ಗ್ರಾಮಸ್ಥರು, ಗ್ರಾಮಸಭೆಯಲ್ಲಿ ಆತಂಕ-ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಬೆಟ್ಟದಳ್ಳಿ ಗ್ರಾ.ಪಂ.ಯ ಸಭಾಂಗಣದಲ್ಲಿ ಅಧ್ಯಕ್ಷೆ ಪವಿತ್ರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಬೆಟ್ಟದಳ್ಳಿ ಗ್ರಾಮಸಭೆಯಲ್ಲಿ ಭಾಗ ವಹಿಸಿದ್ದ ನೂರಾರು ಸಾರ್ವಜನಿಕರು, ಸೂಕ್ಷ್ಮ ಪರಿಸರ ತಾಣ ಘೋಷಣೆ ವಿರುದ್ಧ ದನಿಯೆತ್ತಿದರು.

ಈ ಬಗ್ಗೆ ಕೆಲ ಗಂಟೆಗಳ ಕಾಲ ಚರ್ಚೆ ನಡೆದು ಅಂತಿಮವಾಗಿ ಗ್ರಾಮ ಸಭೆಯಲ್ಲಿ ಘೋಷಣೆಯ ವಿರುದ್ಧ ನಿರ್ಣಯ ಅಂಗೀಕರಿಸಿ ಜಿಲ್ಲಾಧಿಕಾರಿ ಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿ ಸಲಾಯಿತು. ಇದರೊಂದಿಗೆ ಶೀಘ್ರದಲ್ಲೇ ಶಾಂತಳ್ಳಿ ಹೋಬಳಿಗೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ಶಾಸಕರು, ಅರಣ್ಯ ಇಲಾಖಾಧಿಕಾರಿ ಗಳೊಂದಿಗೆ ಇತರ ಜನಪ್ರತಿನಿಧಿಗಳ ಸಮಕ್ಷಮ ವಿಸ್ತøತ ಚರ್ಚೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸೂಕ್ಷ್ಮ ಪರಿಸರ ತಾಣ ಘೋಷಣೆ ಬಗ್ಗೆ ಸಭೆಯಲ್ಲಿ ಹಾಜರಿದ್ದ ಪುಷ್ಪಗಿರಿ ವನ್ಯಜೀವಿ ವಿಭಾಗದ ಫಾರೆಸ್ಟರ್ ದುಷ್ಯಂತ್‍ಕುಮಾರ್ ಮಾಹಿತಿ ನೀಡುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

ಕುಮಾರಳ್ಳಿ ಗ್ರಾಮ, ಅರಣ್ಯದ 448.21 ಹೆಕ್ಟೇರ್ ಹಾಗೂ ಕೊತ್ತನಳ್ಳಿ ಗ್ರಾಮದ 307.99 ಹೆಕ್ಟೇರ್ ಪ್ರದೇಶವನ್ನು ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಲಾಗಿದೆ. ಅರಣ್ಯದ ಅಂಚಿನಿಂದ ಒಂದು ಕಿಲೋಮೀಟರ್ ದೂರದವರೆಗೆ ಈ ಯೋಜನೆ ಅನ್ವಯಿ ಸುತ್ತದೆ ಎಂದು ದುಷ್ಯಂತ್‍ಕುಮಾರ್ ಮಾಹಿತಿ ನೀಡಿದರು.

ನಮ್ಮ ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ನಾವುಗಳು ಸತ್ತು ಹೋಗ್ಬೇಕಾ? ಎಂದು ಗ್ರಾಮಸ್ಥ ಮಹೇಶ್ ಸೇರಿದಂತೆ ಇತರರು ಪ್ರಶ್ನಿಸಿದರು. ಕಸ್ತೂರಿ ರಂಗನ್ ಮತ್ತು ಸೂಕ್ಷ್ಮ ಪರಿಸರ ತಾಣ ವಿಷಯದ ಬಗ್ಗೆ ಕಳೆದ ಕೆಲ ವರ್ಷಗಳಿಂದಲೇ ಪ್ರತಿ ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ವಿರೋಧಿ ನಿರ್ಣಯ ಅಂಗೀಕರಿಸಿ ದ್ದರೂ ಇದೀಗ ಏಕಾಏಕಿ ಜಾರಿಗೊಳಿ ಸುತ್ತಿರುವದು ಏಕೆ? ಎಂದು ಸಭೆಯ ಲ್ಲಿದ್ದ ನೂರಾರು ಮಂದಿ ಗ್ರಾ.ಪಂ. ಜನಪ್ರತಿನಿಧಿಗಳನ್ನು ಪ್ರಶ್ನಿಸಿದರು.

ನಾವುಗಳು ಉದ್ದೇಶಿತ ಯೋಜನೆ ಯನ್ನು ವಿರೋಧಿಸಿ ನಿರ್ಣಯ ಕೈಗೊಂಡು ಕಳುಹಿಸಲಾಗಿದ್ದರೂ ನಮಗೆ ಯಾವದೇ ಮಾಹಿತಿ ನೀಡದಂತೆ ಇದೀಗ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಗ್ರಾ.ಪಂ. ಪ್ರಮುಖರು ಅಸಹಾಯಕತೆ ವ್ಯಕ್ತಪಡಿಸಿದರು.

ಗ್ರಾ.ಪಂ.ಯ ಜನಪ್ರತಿನಿಧಿಗಳು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ನಮಗಳ ಸಮಸ್ಯೆಗಳನ್ನು ಕೇಳುತ್ತಿಲ್ಲ. ಇದರಿಂದಾಗಿಯೇ ಇಂತಹ ಸಮಸ್ಯೆ ಸೃಷ್ಟಿಯಾಗಿದೆ ಎಂದು ಕನ್ನಳ್ಳಿ ಗ್ರಾಮದ ಜಗದೀಶ್ ಆರೋಪಿಸಿದರು.

ಪರಿಸರ ತಾಣದ ನೆಪದಲ್ಲಿ ನಮ್ಮನ್ನೆಲ್ಲಾ ಇಲ್ಲಿಂದ ಒಕ್ಕಲೆಬ್ಬಿಸಿದರೆ ಸಂಬಂಧಿಸಿದ ಇಲಾಖಾ ಕಚೇರಿಗಳ ಎದುರು ಕುಟುಂಬ ಸಹಿತ ವಾಸ್ತವ್ಯ ಹೂಡುತ್ತೇವೆ ಎಂದು ಉದಯ ಕುಮಾರ್ ಎಚ್ಚರಿಸಿದರೆ, ಕೇಂದ್ರ ಸರ್ಕಾರದ ಜನಪ್ರತಿನಿಧಿಯನ್ನಾಗಿ ಸಂಸದ ಪ್ರತಾಪ್ ಸಿಂಹ ಅವರನ್ನು ಕಳುಹಿಸಿದ್ದೇವೆ. ಮುಂದಿನ ಸಭೆಗೆ ಸಂಸದರನ್ನೂ ಕರೆಸಿ, ಅವರೇ ಉತ್ತರ ನೀಡಲಿ ಎಂದು ಉಲ್ಲಾಸ್ ಆಗ್ರಹಿಸಿದರು.

ಚುನಾವಣೆ ಸಂದರ್ಭ ಓಟ್ ಕೇಳೋಕೆ ಮನೆ ಮನೆಗೆ ಬರ್ತೀರಿ, ಸಮಸ್ಯೆ ಬಂದಾಗ ಹೋರಾಟ ಮಾಡಲು ಯಾರೂ ಬರಲ್ಲ ಎಂದು ಹೆಗ್ಗಡಮನೆ ಗ್ರಾಮದ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ 20 ರಿಂದ 30 ವರ್ಷಗಳಿಂದ ನೆಲೆನಿಂತಿದ್ದು ದಶಕಗಳ ಹಿಂದೆಯೇ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಸೂಕ್ಷ್ಮ ಪರಿಸರ ತಾಣವನ್ನು ಒಂದೆರಡು ವರ್ಷಗಳಲ್ಲಿಯೇ ಘೋಷಣೆ ಮಾಡಲು ಸರ್ಕಾರಕ್ಕೆ ಆಗುತ್ತದೆ. ನಮ್ಮ ಸಂಕಷ್ಟ ಬಗೆಹರಿಸಲು ಸಾಧ್ಯವಾಗುವದಿಲ್ಲ ಎಂದು ಬಾಚಳ್ಳಿ ವಿಜಯಕುಮಾರ್ ಆರೋಪಿಸಿದರು.

ಮಲ್ಲಳ್ಳಿ ಗ್ರಾಮದ ಜಲಪಾತ ಬಳಿ ನಿರ್ಮಿಸಲಾಗಿದ್ದ ವಾಸದ ಮನೆಯನ್ನು ಮನೆಯವರು ಇಲ್ಲದ ಸಂದರ್ಭ ಕಂದಾಯ ಇಲಾಖಾಧಿಕಾರಿಗಳು ನೆಲಸಮಗೊಳಿಸಿದ ವಿಷಯದ ಬಗ್ಗೆ ಸಭೆಯಲ್ಲಿ ಅಧಿಕಾರಿಯ ವಿರುದ್ಧ ಏಕವಚನ ಪದಪ್ರಯೋಗವಾಯಿತು.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಉಮೇಶ್ ಮಾಹಿತಿ ನೀಡುತ್ತಿದ್ದಂತೆ ಎದ್ದುನಿಂತ ಮಲ್ಲಳ್ಳಿ ಗ್ರಾಮದ ವೆಂಕಟೇಶ್, ಕಂದಾಯ ಇಲಾಖೆಯವರು ಸರ್ಕಾರದ ಸೌಲಭ್ಯ ಕೇಳಿದ್ರೆ ನಿಮ್ಮದು ಸಿ ಮತ್ತು ಡಿ ಜಾಗ ನಮಗೆ ಸಂಬಂಧವಿಲ್ಲ. ಅರಣ್ಯ ಇಲಾಖೆಯನ್ನು ಕೇಳಿ ಅಂತಾರೆ, ಆದರೆ ಮಲ್ಲಳ್ಳಿ ಗ್ರಾಮದಲ್ಲಿ ನಿರ್ಮಿಸಿದ್ದ ಮಲ್ಲಪ್ಪ ಅವರ ವಾಸದ ಮನೆಯನ್ನು ನೆಲಸಮಗೊಳಿಸಿದ್ದಾರೆ ಎಂದು ಸಭೆಯಲ್ಲಿ ಹೇಳಿದರು.

ಈ ವಿಚಾರವಾಗಿ ಹತ್ತಾರು ಸಾರ್ವಜನಿಕರು ಅಧಿಕಾರಿಯ ವಿರುದ್ಧ ಮುಗಿಬಿದ್ದರು. ನಡುವೆ ಏಕವಚನ ಪದಪ್ರಯೋಗವನ್ನೂ ಮಾಡಿದರು. ಗ್ರಾಮ ಲೆಕ್ಕಿಗ ಉಮೇಶ್ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆ ಮನೆ ಒಡೆದಿದ್ದೇವೆ ಎಂದಾಗ ಎದ್ದುನಿಂತ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಇನ್ನೊಬ್ಬರ ಮನೆಯನ್ನು ಒಡೆಯಿರಿ ಅಂತ ನಾನೂ ಹೇಳ್ತೀನಿ, ನೀವು ಒಡಿತೀರೇನ್ರೀ? ಎಂದು ಆಕ್ರೋಶಿತರಾಗಿ ಪ್ರಶ್ನಿಸಿದರು. ಕಂದಾಯ ಇಲಾಖೆಯವರು ದಾದಾಗಿರಿ ಮಾಡಿದ್ದಾರೆ ಎಂದು ಮಲ್ಲಳ್ಳಿಯ ಗಣೇಶ್ ದೂರಿದರಲ್ಲದೆ, ಎಷ್ಟೊಂದು ಕಷ್ಟದಲ್ಲಿ ನಾವುಗಳು ಜೀವನ ಸಾಗಿಸುತ್ತಿದ್ದೇವೆ ಅಂತ ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದರು.

ಉಳಿದಂತೆ ಗ್ರಾ.ಪಂ. ವ್ಯಾಪ್ತಿಯ ಹಲವಷ್ಟು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು ದುರಸ್ತಿಗೊಳಿಸು ವಂತೆ ಗ್ರಾಮಸ್ಥರು ಒತ್ತಾಯಿಸಿದರು. ಮುಖ್ಯರಸ್ತೆಯ ಬದಿಯಲ್ಲಿ ಚರಂಡಿ, ಗಿಡಗಂಟಿಗಳ ತೆರವು ಮಾಡಬೇಕು. ವಿದ್ಯುತ್ ಮಾರ್ಗಗಳನ್ನು ದುರಸ್ತಿ ಪಡಿಸಬೇಕು ಎಂದು ಬೇಡಿಕೆ ಮುಂದಿಟ್ಟರು.

ಸಭೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಕುಮಾರಿ, ಸದಸ್ಯರುಗಳಾದ ಶಿವಣ್ಣ, ಸೀತಮ್ಮ, ಮಾಚಯ್ಯ, ಯೋಗೇಶ್, ವಿಮಲಾಕ್ಷಿ, ಅಭಿವೃದ್ಧಿ ಅಧಿಕಾರಿ ಚಂಗಪ್ಪ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿ ದ್ದರು. - ವಿಜಯ್ ಹಾನಗಲ್