ಮಡಿಕೇರಿ, ಆ. 8: ರಾಜ್ಯದ ಹಲವು ಅಕಾಡೆಮಿಗಳ ಪೈಕಿ ಕೊಡಗು ಜಿಲ್ಲೆ ಎರಡು ಅಕಾಡೆಮಿಗಳನ್ನು ಹೊಂದಿರುವದು ವಿಶೇಷ. ಎಂ. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ 1994ರಲ್ಲಿ ಸ್ಥಾಪಿಸಿದ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ 2012ರಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭಿಸಲಾಗಿರುವ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅರೆಭಾಷಾ ಅಕಾಡೆಮಿ ದ. ಕನ್ನಡ ವ್ಯಾಪ್ತಿಯನ್ನೂ ಒಳಗೊಂಡಿದೆಯಾದರೂ ಕೇಂದ್ರ ಕಚೇರಿ ಮಡಿಕೇರಿಯಲ್ಲೇ ತೆರೆಯಲಾಗಿದೆ. ಪ್ರಸ್ತುತ ಈ ಎರಡು ಅಕಾಡೆಮಿಗಳ ಮೂರು ವರ್ಷಗಳ ಅಧಿಕಾರಾವಧಿ ಮುಕ್ತಾಯದ ಹಂತ ತಲುಪುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಎರಡು ಅಕಾಡೆಮಿಗಳ ಕೆಲಸಕಾರ್ಯಗಳು ವಿಶೇಷವಾಗಿ ಗಮನ ಸೆಳೆದಿವೆ.

ಬಿದ್ದಾಟಂಡ ಎಸ್. ತಮ್ಮಯ್ಯ ಅಧ್ಯಕ್ಷತೆಯ ಕೊಡವ ಅಕಾಡೆಮಿಯ, ಹಾಗೂ ಕೊಲ್ಯದ ಗಿರೀಶ್ ಅಧ್ಯಕ್ಷತೆಯ ಅರೆಭಾಷೆ ಅಕಾಡೆಮಿಯ ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಆಗಸ್ಟ್ 13 ರಂದು ಕೊನೆಗೊಳ್ಳಲಿದ್ದು, ಸರಕಾರ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಬೇಕಿದೆ. ಕಳೆದ ಫೆಬ್ರವರಿಯಲ್ಲಿ ಅಧಿಕಾರಾವಧಿ ಅಂತ್ಯಗೊಂಡಿದ್ದ ಏಳು ಅಕಾಡೆಮಿಗಳಿಗೆ ನೂತನ ಆಡಳಿತ ಮಂಡಳಿಯನ್ನು ರಾಜ್ಯ ಸರಕಾರ ನಿನ್ನೆಯಷ್ಟೆ ಪ್ರಕಟಿಸಿದ್ದು, ಇದೀಗ ಅಧಿಕಾರ ಮುಕ್ತಾಯಗೊಳ್ಳಲಿ ರುವ ಈ ಎರಡು ಅಕಾಡೆಮಿಗಳಿಗೂ ಶೀಘ್ರವಾಗಿ ಆಯ್ಕೆ ನಡೆಯುವ ಸಾಧ್ಯತೆ ಇದೆ. ವಿಳಂಬವಾದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿರುವ

(ಮೊದಲ ಪುಟದಿಂದ) ಸಾಧ್ಯತೆ ಇರುವದರಿಂದ ಶೀಘ್ರ ನೇಮಕಾತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆತ್ಮ ತೃಪ್ತಿ ಇದೆ: ಬಿ.ಎಸ್. ತಮ್ಮಯ್ಯ

ಮೂರು ವರ್ಷಗಳ ಅಧಿಕಾರಾವಧಿಯ ಅನುಭವ ಕೆಲಸ ಕಾರ್ಯಗಳ ಕುರಿತು ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ನಿರ್ಗಮಿತ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ತಮಗೆ ಶೇಕಡ ನೂರಕ್ಕೆ ನೂರರಷ್ಟು ಆತ್ಮತೃಪ್ತಿ ಇರುವದಾಗಿ ನುಡಿದರು. ಅಕಾಡೆಮಿಯ ಕಾರ್ಯಕ್ರಮ, ಯೋಜನೆಗಳನ್ನು ಜಿಲ್ಲೆಯಾದ್ಯಂತ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಲ್ಲೂ ಪರಿಚಯಿಸಿ ತಲುಪಿಸುವ ಪ್ರಯತ್ನದಲ್ಲಿ ಯಶಸ್ಸು ಕಾಣಲಾಗಿದೆ. ಕೊಡವರು ಸೇರಿದಂತೆ ಎಲ್ಲಾ ಕೊಡವ ಭಾಷಿಕರಿಗೂ ಸೌಲಭ್ಯ-ಕಾರ್ಯಕ್ರಮಗಳನ್ನು ಒದಗಿಸಲಾಗಿದೆ. ಈ ಅವಧಿಯಲ್ಲಿ ಕಷ್ಟವೂ ಇತ್ತು... ಸುಖವೂ ಇತ್ತು. ವೈಯಕ್ತಿಕವಾಗಿ ತಮಗೆ ಕುತ್ತು ಬಂದರೂ ಅಕಾಡೆಮಿಯ ಉದ್ದೇಶಕ್ಕೆ ಯಾವದೇ ಚ್ಯುತಿಯಾಗದಂತೆ ಕೆಲಸ ನಿರ್ವಹಿಸಿರುವ ಹೆಮ್ಮೆ ಇರುವದಾಗಿ ತಮ್ಮಯ್ಯ ಸ್ಮರಿಸಿಕೊಂಡರು.

ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಅಕಾಡೆಮಿಯ ಸದಸ್ಯರುಗಳು, ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರ ದೊರೆತಿದೆ. ಈ ಮೂಲಕವೇ ಸರಕಾರ ಕೊಟ್ಟ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯಿತು. ಜಿಲ್ಲೆಯ ಜನತೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವಷ್ಟು ಹೊಸತನದ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಎಲ್ಲಕ್ಕಿಂತ ಮಹತ್ವಾಕಾಂಕ್ಷೆಯಾಗಿದ್ದ ಕೊಡವ ಜನಾಂಗದ ಆಚಾರ-ವಿಚಾರ, ಪದ್ಧತಿ ಪರಂಪರೆಗಳನ್ನು ಸಮಗ್ರವಾಗಿ ದಾಖಲೀಕರಣಗೊಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಯಶಸ್ಸಿನ ಹಾದಿಯಲ್ಲಿದೆ. ಈ ಬಾರಿಯ ಕೊನೆಯ ಕಾರ್ಯಕ್ರಮವಾಗಿ ತಾ. 12 ರಂದು ಇದರ ಬಿಡುಗಡೆ ನಡೆಯಲಿದೆ. ಈ ಪ್ರಯತ್ನಕ್ಕೆ ಸ್ವತಃ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವೆ ಉಮಾಶ್ರೀ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಮ್ಮಯ್ಯ ಸಂತಸ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ನಡೆಸಿರುವ ಕುಡಿಯ ಜನಪದ ಮೇಳ, ಕೊಡವ ಮೇಳ, ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ, ದೆಹಲಿ, ಮುಂಬೈ, ಬೆಂಗಳೂರು ಮೈಸೂರು ಮತ್ತಿತರ ಕಡೆಗಳಲ್ಲಿ ನಡೆಸಿದ ಕಾರ್ಯಕ್ರಮಗಳಿಗೂ ಉತ್ತಮ ಪ್ರತಿಕ್ರಿಯೆ ದೊರೆತಿರುವದು ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತಂತಾಗಿದೆ ಎಂದು ಅವರು ನಿರಾಳತೆ ವ್ಯಕ್ತಪಡಿಸಿದರು.

103 ಕಾರ್ಯಕ್ರಮ

ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಎಲ್ಲಾ ಕೊಡವ ಭಾಷಿಕರಿಗೂ ಉಪಯುಕ್ತವಾಗುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುವ ಮೂಲಕ ದಾಖಲೆಯ 103 ಕಾರ್ಯಕ್ರಮಗಳನ್ನು ನಡೆಸಲಾಗಿದೆ. 22 ಪುಸ್ತಕ ಬಿಡುಗಡೆ, 8 ಸಿ.ಡಿ.ಗಳನ್ನು ಹೊರತರಲಾಗಿದೆ. ಎಲ್ಲಾ 20 ಭಾಷಿಕ ಜನಾಂಗದವರು ದಾಖಲೀಕರಣದಲ್ಲಿ ಒಳಗೊಂಡಿದ್ದಾರೆ. ಇದರೊಂದಿಗೆ ಅಪ್ಪಚ್ಚಕವಿ ಸಂಶೋಧನಾ ಕೃತಿಯನ್ನೂ ಹೊರತರಲಾಗುತ್ತಿದೆ. ಮುಚ್ಚಿ ಹೋಗಿದ್ದ ಹಲವಷ್ಟು ‘ಮಂದ್’ಗಳನ್ನು ತೆರೆಯಲಾಗಿದೆ. ಆರಂಭದ ವರ್ಷ ಒಟ್ಟು 14 ಕಾರ್ಯಕ್ರಮ ಮಾತ್ರ ನಡೆಸಲು ಸಾಧ್ಯವಾಗಿತ್ತು. ಆದರೆ ನಂತರ ಉತ್ತಮ ಅಧಿಕಾರಿಗಳು, ಸಿಬ್ಬಂದಿಗಳು ಅಕಾಡೆಮಿಗೆ ದೊರೆತ ನಂತರ ಎಲ್ಲಾ ಕಾರ್ಯ ಯೋಜನೆಗಳನ್ನು ಸುಸೂತ್ರವಾಗಿ ಮುಂದುವರಿಸಲು ಸಾಧ್ಯವಾಯಿತು. ಎಲ್ಲಾ ಸದಸ್ಯರುಗಳು ಕೈಜೋಡಿಸಿದ್ದರಿಂದ ಈ ಯಶಸ್ಸು ಸಾಧ್ಯವಾಯಿತು ಎಂದ ಅವರು, ಅಧಿಕಾರಿಗಳು, ಸದಸ್ಯರ ಸಹಕಾರವಿದ್ದಲ್ಲಿ ಏನನ್ನೂ ಸಾಧಿಸಬಹುದು ಎಂದರು.

ಪೂರ್ಣ ಸಹಕಾರ

ಅಕಾಡೆಮಿಗೆ ನೇಮಕಗೊಳ್ಳುವ ನೂತನ ಆಡಳಿತ ಮಂಡಳಿಗೆ ಪೂರ್ಣ ಸಹಕಾರ ನೀಡಲಾಗುವದು. ಅವರೊಂದಿಗೆ ಕೈಜೋಡಿಸಿ ಎಲ್ಲಾ ರೀತಿಯ ಕೆಲಸಕ್ಕೂ ಸಿದ್ಧವಿರುವದಾಗಿ ಹೇಳಿದ ಅವರು ನೂತನವಾಗಿ ಬರುವವರಿಗೆ ಅಕಾಡೆಮಿ ಕಚೇರಿಯ ಒಳಗೂ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅವರ ಕೆಲಸ ಕಾರ್ಯಗಳಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು