ಮಡಿಕೇರಿ, ಆ. 8: ಕೇಂದ್ರದ ಬಿಜೆಪಿ ಸರಕಾರ ಮೂರು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ಅಧಿಕಾರಾವಧಿ ಅಂತ್ಯಗೊಳ್ಳುತ್ತಾ ಬರುತ್ತಿದ್ದು, ಇನ್ನೇನು ಕೆಲವು ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈ ಚುನಾವಣೆಯ ಮೇಲೆ ರಾಜಕೀಯ ಪಕ್ಷಗಳು ಈಗಾಗಲೇ ದೃಷ್ಟಿ ಹರಿಸಿದ್ದು, ಈಗಿನಿಂದಲೇ ಕಾರ್ಯತಂತ್ರಗಳು ಆರಂಭಗೊಂಡಿವೆ. ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಬಿಜೆಪಿ ಪಕ್ಷ ವಿಸ್ತಾರಕ್ ಹೆಸರಿನಲ್ಲಿ ಜನತೆಯ ಮನೆ ಮನೆಗೆ ಮುಟ್ಟಿಸುವ ಪ್ರಯತ್ನ ನಡೆಸಿದ್ದು, ಹಲವು ದಿನಗಳ ಕಾಲ ನಡೆದ ವಿಸ್ತಾರಕ್ ಕಾರ್ಯಕ್ರಮ ಯಶಸ್ಸು ಕಂಡಿದೆ. ಪಕ್ಷದ ಶಾಸಕರು, ಅಧ್ಯಕ್ಷರು, ಪ್ರಮುಖರಾದಿಯಾಗಿ ಕಾರ್ಯಕರ್ತರು ಅವರವರ ಕಾರ್ಯಕ್ಷೇತ್ರದಿಂದ ಬೇರೆ ಸ್ಥಳಕ್ಕೆ ಈ ಕರ್ತವ್ಯಕ್ಕಾಗಿ ನಿಯೋಜನೆ ಗೊಂಡು ಆಂದೋಲನ ರೂಪದಲ್ಲಿ ಇದನ್ನು ಪಕ್ಷದ ಸೂಚನೆಯಂತೆ ಯಶಸು ್ಸಗೊಳಿಸಿದ್ದಾರೆ. ಅವರವರ ವ್ಯಾಪ್ತಿ ಯನ್ನು ಬದಲಾಯಿಸಿ ಬೇರೆ ಸ್ಥಳಕ್ಕೆ ಪ್ರಮುಖರು ಕಾರ್ಯಕರ್ತರನ್ನು ಇದಕ್ಕೆ ನಿಯೋಜಿಸಿದ್ದು ವಿಶೇಷ ವಾಗಿತ್ತು. ಬಿಜೆಪಿಯ ಒಂದು ಸುತ್ತಿನ ಪ್ರಯತ್ನ ಈಗಾಗಲೇ ಮುಗಿದಿದೆ.

ಇನ್ನು ಈತನಕ ನಿಂತ ನೀರಿನಂತಿದ್ದ ಕಾಂಗ್ರೆಸ್ ಪಕ್ಷದ ಚಟುವಟಿಕೆಯೂ ಜಿಲ್ಲೆಯಲ್ಲಿ ಒಂದಷ್ಟು ಬಿರುಸು ಕಾಣುತ್ತಿದೆ. ಜಿಲ್ಲಾ ಕಾಂಗ್ರೆಸ್‍ಗೆ ಯುವ ನಾಯಕ ಶಿವು ಮಾದಪ್ಪ ಅವರು ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡ ಬಳಿಕ ಪಕ್ಷದಲ್ಲಿ ಒಂದಷ್ಟು ಉತ್ಸಾಹ ಕಂಡುಬರುತ್ತಿರು ವದು ಮೇಲ್ನೋಟಕ್ಕೆ ಗೋಚರ ವಾಗುತ್ತಿದೆ. ಶಿವು ಮಾದಪ್ಪ ಅವರು ಅಧ್ಯಕ್ಷರಾದ ಬಳಿಕ ಸೋಮವಾರಪೇಟೆ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದಿದ್ದು, ಇದರೊಂದಿಗೆ ಅಲ್ಲಲ್ಲಿ ಕಾರ್ಯಕರ್ತರ ಸಭೆ ಆಯೋಜನೆಯ ಮೂಲಕ ಪಕ್ಷವನ್ನು ಸಂಘಟನೆಗೊಳಿಸ ಲಾಗುತ್ತಿದೆ. ಆಗಸ್ಟ್ 15ರ ಬಳಿಕ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬೂತ್ ಸಮಿತಿ, ವಲಯ ಸಮಿತಿಯನ್ನು ಸಂಘಟಿಸಲಾಗುವದು ಅಲ್ಲದೆ, ಎಲ್ಲಾ ಬ್ಲಾಕ್‍ಗಳ ಸಮಾವೇಶ ನಡೆಸುವದರ ಜತೆಗೆ ಸಾಲ ಮನ್ನಾ ಸೇರಿದಂತೆ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಸಾಧನೆಗಳನ್ನು ಕೈಪಿಡಿಯ ಮೂಲಕ ಜನರ ಮನೆ ಬಾಗಿಲಿಗೆ ತಲಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಹಾಗೂ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರು ತಿಳಿಸಿದ್ದಾರೆ. ಕೆ.ಎಂ. ಗಣೇಶ್ ರಾಜೀನಾಮೆಯಿಂದ ತೆರವಾಗಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ಸದ್ಯದಲ್ಲಿ ಹೊಸಬರ ಆಯ್ಕೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದುಹೋದ ಅಧಿಕಾರವನ್ನು ಮತ್ತೆ ಹಿಡಿಯಲು ಹಾಗೂ ಜಿಲ್ಲೆಯ ಎರಡು ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸುತ್ತಿದ್ದರೆ, ಹಲವು ವರ್ಷಗಳಿಂದ ‘ಕೈ’ ತಪ್ಪಿರುವ ಎರಡು ಕ್ಷೇತ್ರವನ್ನು ಮತ್ತೆ ಪಡೆಯಲು ಈ ಬಾರಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಇನ್ನು ಜೆಡಿಎಸ್ ಪಕ್ಷದಲ್ಲಿ ಮಾಜಿ ಸಂಸದ ಹೆಚ್. ವಿಶ್ವನಾಥ್ ಸೇರ್ಪಡೆ ಒಂದಷ್ಟು ಚೇತನ ಮೂಡಿಸಿದೆ. ಇವರೊಂದಿಗೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಹಾಗೂ ಹಲವರು ಜೆ.ಡಿ.ಎಸ್. ಸೇರ್ಪಡೆಯಾಗಿದ್ದಾರೆ. ಪಕ್ಷದ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಒಂದಷ್ಟು ಬಿರುಸಿನ ಚಟುವಟಿಕೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಜೆಡಿ(ಎಸ್) ಜಿಲ್ಲಾಧ್ಯಕ್ಷರ ಘೋಷಣೆ ಸಾಧ್ಯತೆಗಳಿದ್ದು, ಹೊಸ ಮುಖಗಳನ್ನು ಪರಿಚಯಿಸಲು ವರಿಷ್ಠರು ಪ್ರಯತ್ನಿಸುತ್ತಿದ್ದಾರೆ. ಆದರೆ ಹಳೆ ತಲೆಗಳು ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಅಂತಿಮ ಚೆಂಡು ಹೆಚ್.ಡಿ. ಕುಮಾರಸ್ವಾಮಿ ಅವರ ಕೈಯಲ್ಲಿದೆ. ಈಗಾಗಲೇ ಜೀವಿಜಯ ಅವರನ್ನು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯೆಂದು ಪ್ರತಿಬಿಂಬಿಸ ಲಾಗಿದ್ದು, ವೀರಾಜಪೇಟೆ ಕ್ಷೇತ್ರಕ್ಕೂ ಹಲವರು ಆಸಕ್ತಿ ತೋರಿದ್ದಾರೆ.

2018ರ ಮೇ ವೇಳೆಗೆ ಬಹುಶಃ ಚುನಾವಣೆ ಎದುರಾಗುವ ಸಾಧ್ಯತೆ ಯಿದೆಯಾದರೂ ಈಗಿನಿಂದಲೇ ಪೂರ್ವ ತಯಾರಿಯಲ್ಲಿ ರಾಜಕೀಯ ಪಕ್ಷಗಳು ತೊಡಗಿಸಿ ಕೊಳ್ಳುತ್ತಿರು ವದರಿಂದ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.