ಮಡಿಕೇರಿ, ಆ. 8: ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ಹಾಗೂ ಸಹಾಯಧನ ದೊರೆತಲ್ಲಿ ಮಳೆ ಕೊರತೆ ಸಮಸ್ಯೆ ಸಿಗಲಿದೆ ಎಂದು ಸಹಕಾರ ಮಹಾಮಂಡಳ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಭಿಪ್ರಾಯಿಸಿದರು.ಹಾಸನದ ಕೃಷಿಕ್ ಭಾರತಿ ಕೋ ಆಪರೇಟಿವ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೃಷಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಹಕಾರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಬೆಳೆಗೆ ಬೆಂಬಲ ಬೆಲೆಯ ಕೊರತೆಯಿಂದಾಗಿ ಶೇ. 95ರಷ್ಟು ಮಂದಿ ಭತ್ತ ಬೆಳೆಯದೆ ಗದ್ದೆಯನ್ನು ಪಾಳು ಬಿಟ್ಟಿದ್ದಾರೆ. ಪಾಳು ಬಿಟ್ಟಿರುವ ಕೃಷಿ ಭೂಮಿಯನ್ನು ಸರಕಾರ ವಶಕ್ಕೆ ಪಡೆಯುವ ತೀರ್ಮಾನ ಕೈಗೊಂಡಿರುವದು ದುರದೃಷ್ಟಕರ. ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕದ

(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಯಾರೂ ಕೂಡ ನಷ್ಟದಲ್ಲಿ ಬೇಸಾಯ ಮಾಡಲು ಮುಂದೆ ಬರುವದಿಲ್ಲ.

ಇದರಿಂದಾಗಿ ಮಳೆಯ ಕೊರತೆಯೆದುರಾಗಿದೆ. ಬೆಂಬಲ ಬೆಲೆ ಸಹಾಯಧನ ನೀಡಿದರೆ ಕೃಷಿಕರು ಬೇಸಾಯ ಮಾಡಲು ಮುಂದಾಗಲಿದ್ದು, ಅಂತರ್ಜಾಲ ಮಟ್ಟ ಏರಿಕೆಯಾಗಲಿದೆ. ಮಳೆ ಸಮಸ್ಯೆ ಸೀಗಲಿದೆ ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸುತ್ತಿಲ್ಲವೆಂದು ಹೇಳಿದರು.

ಕೊಡಗಿನಲ್ಲಿ ಮಳೆ ಬಂದು ಹೊರ ಜಿಲ್ಲೆಗಳಿಗೆ ನೀರು ಸಿಕ್ಕಿದರೆ ಸಾಕೆಂಬ ಭಾವನೆ ಸರಕಾರದ್ದಾಗಿದೆ. ರೈತರ ಸಮಸ್ಯೆ ಬಗ್ಗೆ ಗಮನವಿಲ್ಲ. ಎಕರೆಗೆ 5 ಸಾವಿರದಂತೆ ಬೆಂಬಲ ಬೆಲೆ ನೀಡಿದರೆ ಕೃಷಿಗೆ ಮರುಜೀವ ಬರಲಿದೆ ಎಂದು ಹೇಳಿದ ಅವರು, ಕೇಂದ್ರ ಸರಕಾರ ರಸಗೊಬ್ಬರದ ಅಭಾವ ತಲೆದೋರದಂತೆ ಕ್ರಮ ಕೈಗೊಂಡಿದೆ. ಆದರೆ ಕಳಪೆ ಗೊಬ್ಬರಗಳ ಬಗ್ಗೆ ರೈತರು ಜಾಗೃತೆ ವಹಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಮಹಾಮಂಡಳದ ನಿರ್ದೇಶಕ ಪಿ.ಎಸ್. ಬೆಲ್ಲು ಸೋಮಯ್ಯ ಮಾತನಾಡಿ, ರಾಜ್ಯದಲ್ಲಿ ಶೇ. 75ರಷ್ಟು ಮಂದಿ ರೈತರೇ ಆಗಿದ್ದು, ಸರಕಾರ ಇವರುಗಳ ಬಗ್ಗೆ ಗಮನ ಹರಿಸುತ್ತಿಲ್ಲ. ರೈತರಿಗೆ ಯಾವದೇ ಅನುಕೂನ ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ಬರಗಾಲದ ಪರಿಸ್ಥಿತಿ ಇದ್ದು, ಸರಕಾರ ಕೇವಲ ರೂ. 1550 ಬೆಂಬಲ ಬೆಲೆ ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೈತ ಬೇಸಾಯ ಮಾಡುವದಾದರೂ, ರಸಗೊಬ್ಬರ ಖರೀದಿಸುವದಾದರೂ ಹೇಗೆ? ಎಂದು ಪ್ರಶ್ನಿಸಿದರು.

ಜಿಲ್ಲೆಯ ಪರಿಸ್ಥಿತಿ ಯಾರೂ ಕೇಳೋರಿಲ್ಲ. ಏಲಕ್ಕಿ, ಜೇನು, ಕಿತ್ತಳೆ ನಾಶವಾಗಿದೆ. ಕರಿಮೆಣಸು ನಾಶದ ಅಂಚಿನಲ್ಲಿದೆ ಕಾಫಿಯೊಂದೇ ಜೀವಾನಾಧಾರವಾಗಿದ್ದು, ಅದು ಹೋದರೆ ಪರಿಸ್ಥಿತಿ ಹೇಗೆ? ಎಂದು ಆತಂಕ ವ್ಯಕ್ತಪಡಿಸಿದರು. ಅಧಿಕಾರಿಗಳು ಪಟ್ಟಣಗಳಲ್ಲಿ ಕಾರ್ಯಾಗಾರ ಏರ್ಪಡಿಸುವದಕ್ಕಿಂತ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ಏರ್ಪಡಿಸಿ ರೈತರಿಗೆ ಮಾಹಿತಿ ನೀಡಿದರೆ ಅನುಕೂಲಕರವೆಂದು ಹೇಳಿದರು.

ಪ್ರಸ್ತುತ ಕಾರ್ಮಿಕರ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಇದರಿಂದ ಸಣ್ಣ ಬೆಳೆಗಾರರಿಗೆ ಭಾರೀ ತೊಂದರೆ ಆಗಿದೆ, ಆದರೂ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ. ಇದರಿಂದಾಗಿ ಸಾಲ ಬಾಧೆಯಿಂದ ರೈತ ತತ್ತರಿಸುವಂತಾಗಿದೆ ಎಂದು ಹೇಳಿದರು.

ಸರಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಪಿ. ನಿಂಗಪ್ಪ ಮಾತನಾಡಿ, ಹಿಂದೆ ರಸಗೊಬ್ಬರ ಪೂರೈಕೆಯಾಗುವದೇ ಕಷ್ಟವಾಗಿತ್ತು. ಇಂದು ಸಮರ್ಪಕವಾಗಿ ಸಿಗುತ್ತಿದೆ. ರೈತರು ಮಾರಾಟ ಕಂಪೆನಿಗಳ ಉತ್ಪನ್ನಗಳನ್ನು ನಂಬಿ ಗೊಬ್ಬರ ಹಾಕುತ್ತಾರೆ. ಗುಣಮಟ್ಟ ಉತ್ತಮವಾಗಿರಬೇಕೆಂದು ಹೇಳಿದರು.

ರೈತರಿಗೆ ಸಹಾಯಧನ : ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಮೇಶ್ ಮಾಹಿತಿ ನೀಡುತ್ತಾ, ಇನ್ನೂ ಮುಂದಕ್ಕೆ ‘ಡಿ.ಬಿ.ಟಿ.’ ಯೋಜನೆಯಡಿ ಗೊಬ್ಬರ ಖರೀದಿಸುವ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಹಾಯಧನ ಪಾವತಿಯಾಗಲಿದೆ. ರೈತರು ಗೊಬ್ಬರದ ಪೂರ್ಣ ಹಣ ಪಾವತಿಸಿ ಪಡೆಯಬೇಕಾಗಿದ್ದು, ಸಹಾಯಧನ ಬ್ಯಾಂಕ್ ಖಾತೆಗೆ ಪಾವತಿಯಾಗಲಿದೆ ಎಂದರು. ಇದೀಗ ಕೃಷಿ ಕಾರ್ಯಗಳ ಯಾಂತ್ರೀಕರಣವಾಗುತ್ತಿದ್ದು, ಈ ಸಾಲಿನಿಂದ ನಾಟಿ ಕಾರ್ಯ ಕೂಡ ಯಂತ್ರದ ಮೂಲಕ ಪರಿಚಯಿಸಲಾಗಿದೆ. ಇದರಿಂದ ಕಾರ್ಮಿಕರ ಸಮಸ್ಯೆ ನಿವಾರಣೆಯಾದಂತಾಗುತ್ತದೆ ಎಂದರು. ಈ ಬಾರಿ ಕೃಷಿ ಯಂತ್ರೋಪಕರಣಕ್ಕಾಗಿ ರೂ. 1 ಕೋಟಿ ಅನುದಾನ ಬಂದಿರುವದಾಗಿ ತಿಳಿಸಿದ ಅವರು, ಯಂತ್ರದ ಮೂಲಕ ನಾಟಿ ಕಾರ್ಯ ಕೈಗೊಳ್ಳುವ ರೈತರಿಗೆ 1 ಹೆಕ್ಟೇರ್‍ಗೆ ರೂ. 4 ಸಾವಿರ ಸಹಾಯಧನ ನೀಡಲಾಗುವದು. ಓರ್ವ ರೈತನಿಗೆ 2 ಎಕರೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲೆಯಲ್ಲಿ ಒಟ್ಟು 300 ಕೃಷಿ ಹೊಂಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕ್ರಿಭ್ಕೋ ಸಂಸ್ಥೆಯ ಹೆಚ್.ಈ. ಮರಿಸ್ವಾಮಿ ಮಾತನಾಡಿ, ಕೊಡಗು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಪ್ರಬಲವಾಗಿದೆ. ಉತ್ತಮ ಲಾಭ ಗಳಿಸುತ್ತಿದೆ ಎಂದು ಹೇಳಿದರು. ದೇಶದಲ್ಲಿ ಒಟ್ಟು 28 ಕಡೆಗಳಲ್ಲಿ ಗೊಬ್ಬರ ಉತ್ಪಾದನಾ ಘಟಕಗಳಿವೆ, ಪ್ರಸ್ತುತ ಮಳೆ ಕೊರತೆಯಿಂದ ಗೊಬ್ಬರ ಮಾರಾಟ ಕೂಡ ಕಡಿಮೆಯಾಗಿದೆ ಎಂದು ತಿಳಿಸಿದರು. ‘ಡಿ.ಬಿ.ಟಿ.’ ಯೋಜನೆ ರೈತರಿಗೆ ಬಲು ಉಪಯುಕ್ತವಾಗಿದೆ. ಯಾರೂ ಕೂಡ ಆತಂಕ ಪಡಬೇಕಾಗಿಲ್ಲ. ಯಾರೂ ಎಷ್ಟು ಗೊಬ್ಬರ ಖರೀದಿಸುತ್ತಾರೆ ಎಂಬದು ಅನ್‍ಲೈನ್ ಮೂಲಕ ಸರಕಾರಕ್ಕೆ ಗೊತ್ತಾಗುತ್ತದೆ. ಅವರ ಖಾತೆಗಳಿಗೆ ನೇರವಾಗಿ ಸಹಾಯಧನ ಸಿಗಲಿದೆ. ಸದ್ಯದಲ್ಲೇ ಕೊಡಗು ಜಿಲ್ಲೆ ‘ಡಿ.ಬಿ.ಟಿ.’ ಯಂತ್ರ ಬರಲಿದೆ ಎಂದು ತಿಳಸಿದರು. ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರುಗಳಾದ ಗಣಪತಿ, ಪ್ರೇಮಾ ಸೋಮಯ್ಯ, ಎಂ.ಬಿ. ಜೋಯಪ್ಪ, ಮಹಾಮಂಡಳ ವ್ಯವಸ್ಥಾಪಕ ವೆಂಕಟೇಶ್, ಯೂನಿಯನ್‍ನ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಇನ್ನಿತರರಿದ್ದರು. ಕ್ರಿಭ್ಕೋ ಹಿರಿಯ ವಲಯ ವ್ಯವಸ್ಥಾಪಕ ವಿ.ಎಸ್. ಸಾಲಿಮಠ ಸ್ವಾಗತಿಸಿದರು.