ಶ್ರೀಮಂಗಲ, ಆ. 8: ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ಧಾಳಿಗೆ ತುತ್ತಾಗಿ ಹಸುಗಳು ಬಲಿಯಾಗಿರುವ ನಾಲ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಅರಣ್ಯ ಇಲಾಖೆಯಿಂದ ಪರಿಹಾರದ ಚೆಕ್ ಬಿಡುಗಡೆ ಯಾಗದಿರುವ ಬಗ್ಗೆ ವೀರಾಜಪೇಟೆ ತಾಲೂಕು ಬೆಳೆಗಾರರ ಒಕ್ಕೂಟ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಒಕ್ಕೂಟದಿಂದ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಗಳ ಕಚೇರಿಗೆ ಒಕ್ಕೂಟ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಅವರ ನೇತೃತ್ವದಲ್ಲಿ ಒಕ್ಕೂಟದ ಪದಾದಿಕಾರಿಗಳು ತೆರಳಿ ಕೂಡಲೇ ಸಂತ್ರಸ್ಥ ರೈತರಿಗೆ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಯಲ್ಲಿ ಹಾಗೂ ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಿರುವ ಮೌಲ್ಯವನ್ನು ಅರಣ್ಯ ಇಲಾಖೆ ನೀಡಬೇಕೆಂದು ಒತ್ತಾಯಿಸಿದರು.

ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣನವರ್ ಈ ಬಗ್ಗೆ ಪ್ರತಿಕ್ರಿಯಿಸಿ ತಮಗೆ ಪಶುವೈದ್ಯಾಧಿಕಾರಿಗಳಿಂದ ಇನ್ನೂ ವರದಿ ಬಂದಿಲ್ಲ. ವರದಿ ಬಂದ ತಕ್ಷಣ ಹಸುವಿನ ಪರಿಹಾರದ ಮೌಲ್ಯವನ್ನು ಶಿಫಾರಸ್ಸು ಮಾಡಿ, ಮಂಜೂರಾತಿಗಾಗಿ ಮಡಿಕೇರಿ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಾಣಾಧಿಕಾರಿ (ಡಿ.ಸಿ. ಎಫ್.) ಅವರಿಗೆ ಕಳುಹಿಸಿ ಕೊಡಲಾಗುವದು ಎಂದು ಹೇಳಿದರು.

ಈ ಸಂದರ್ಭ ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರಿಂದ ವರದಿಯನ್ನು ವಲಯ ಅರಣ್ಯಾಧಿಕಾರಿಯವರ ಕಚೇರಿಗೆ ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿಯೇ ಅರಣ್ಯ ಸಿಬ್ಬಂದಿ ಮೂಲಕ ರವಾನಿಸಿದರು.

ಈ ಸಂದರ್ಭ ಕಳೆದ ಒಂದು ತಿಂಗಳಲ್ಲಿ ಶ್ರೀಮಂಗಲ ವ್ಯಾಪ್ತಿಯಲ್ಲಿ 4 ಹುಲಿ ಧಾಳಿ ಪ್ರಕರಣದಲ್ಲಿ 5 ರಾಸುಗಳು ಬಲಿಯಾಗಿದ್ದು, ಒಂದು ಹಸು ಗಂಭೀರವಾಗಿ ಗಾಯ ಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಇರುವ ಬಗ್ಗೆ ಮಡಿಕೇರಿ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಾಣಾಧಿ ಕಾರಿ ಎಂ. ಜಯಾ ಅವರೊಂದಿಗೆ ದೂರವಾಣಿ ಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಅವರು, ಕೂಡಲೇ ನಷ್ಟವನ್ನು ಪಾವತಿ ಮಾಡುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಸಿ.ಎಫ್. ಅವರು, ತಮ್ಮ ಕಚೇರಿಗೆ ಪಶು ವೈದ್ಯಾಧಿಕಾರಿಗಳ ಮರಣೋತ್ತರ ಪರೀಕ್ಷೆ ಹಾಗೂ ರಾಸುವಿನ ಮೌಲ್ಯಮಾಪನದ ವರದಿ ಇನ್ನೂ ಬಂದಿಲ್ಲ. ಇದು ಬಂದ ಮರುದಿನವೇ ಪರಿಹಾರದ ಚೆಕ್ ವಿತರಿಸುವದಾಗಿ ಭರವಸೆ ನೀಡಿದರು. ಅಲ್ಲದೇ ಗಾಂiÀi ಗೊಂಡಿರುವ ಹಸುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸಹ ಅರಣ್ಯ ಇಲಾಖೆ ನೀಡುವದಾಗಿ ಆಶ್ವಾಸನೆಯಿತ್ತರು.

ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಜಿಲ್ಲಾ ಸಮಿತಿ ಸದಸ್ಯ ಮಾಣೀರ ಮುತ್ತಪ್ಪ, ಶ್ರೀಮಂಗಲ ಹೋಬಳಿ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಬೆಳೆಗಾರ ಪ್ರಮುಖರಾದ ಅಯ್ಯಮಾಡ ಸೋಮೇಶ್, ಮಚ್ಚಮಾಡ ರಂಜಿ, ಚಂಗುಲಂಡ ರಾಜಪ್ಪ, ಹುಲಿ ಧಾಳಿಯಿಂದ ಹಸು ಕಳೆದುಕೊಂಡ ರೈತ ಉಪ್ಪಾರರ ಶಶಿಧರ್ (ಕಿಟ್ಟ) ಮತ್ತಿತರರು ಹಾಜರಿದ್ದರು.