ಕುಶಾಲನಗರ, ಆ. 8: ಪಾಳು ಬಿದ್ದಿರುವ ಹೊಲ ಗದ್ದೆಗಳ ಪುನಶ್ಚೇತನ ಮಾಡುವಲ್ಲಿ ರೈತಾಪಿ ವರ್ಗ ಚಿಂತನೆ ಹರಿಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಕರೆ ನೀಡಿದ್ದಾರೆ.ಕರ್ನಾಟಕ ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ದೊಡ್ಡಬೆಟಗೇರಿಯ ಬಿ.ಡಿ.ವೀರೇಂದ್ರ ಅವರ ಗದ್ದೆಯಲ್ಲಿ ಶಾಲಾ ಮಕ್ಕಳಿಗೆ ಮತ್ತು ಪರಿಷತ್ ಸದಸ್ಯರಿಗೆ ಏರ್ಪಡಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದ ಅವರು ರೈತರು ಹಾಗೂ ಗ್ರಾಮೀಣ ಜನರು ದೇವರಂತೆ ಪೂಜಿಸುವದರೊಂದಿಗೆ ಬೆಳೆ ಬೆಳೆಯುತ್ತಿದ್ದ ಭೂಮಿ ಆಧುನಿಕತೆಯಿಂದ ಕಣ್ಮರೆ ಯಾಗುತ್ತಿರು ವದು ಆತಂಕದ ವಿಚಾರವಾಗಿದೆ. ಕಣ್ಣಿಗೆ ಕಾಣುವ ಗಿಡ, ಮರ, ನೆಲ, ಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವ ಜನಾಂಗ ಚಿಂತನೆ ಹರಿಸಬೇಕು. ದೈವ ಸ್ವರೂಪಿ ಯಾದ ಭೂಮಿಯನ್ನು ಪೂಜ್ಯ ಭಾವದಿಂದ ಆರಾಧಿಸುವಂತಾಗ ಬೇಕಿದೆ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಜಾನಪದ ಸಂಸ್ಕøತಿಯನ್ನು ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿಯಾಗಿವೆ. ನಶಿಸುತ್ತಿರುವ ಜಾನಪದ ಹಾಗೂ ಗ್ರಾಮೀಣ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವದು ಇಂದು ಅಗತ್ಯವಾಗಿದೆ ಎಂದರು. ಪ್ರಗತಿಪರ ಕೃಷಿಕ ಬಿ.ಎಸ್.ಧನಪಾಲ್ ಅವರು ಮಾತನಾಡಿ, ರೈತರಿಗೆ ಕೃಷಿ ಚಟುವಟಿಕೆ ಅಭಿವೃದ್ಧಿಗೊಳಿಸಲು ಸರಕಾರದ ಸಹಾಯ ಹಸ್ತ ಅಗತ್ಯವಾಗಿದೆ ಎಂದರು.

ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಅವರು ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಗದ್ದೆ ಮಾಲೀಕರಾದ ಬಿ.ಡಿ. ವೀರೇಂದ್ರ, ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಉಪಾಧ್ಯಕ್ಷೆ ಶೋಭಾ ಸುಬ್ಬಯ್ಯ, ಖಜಾಂಚಿ ಸಂಪತ್‍ಕುಮಾರ್, ಗುಡ್ಡೆಹೊಸೂರು ಸರಕಾರಿ ಶಾಲಾ ಮುಖ್ಯೋಪಾಧ್ಯಾಯ ರಾದ ಸಣ್ಣಸ್ವಾಮಿ, ಐನಮಂಡ ಗಣಪತಿ ಮೊದಲಾದವರಿದ್ದರು.

ಜಿಲ್ಲಾ ಘಟಕದ ಪಿ.ಆರ್. ರಾಜೇಶ್, ನವೀನ್ ಅಂಬೇಕಲ್, ಪರಿಷತ್‍ನ ತಾಲೂಕು ಪ್ರಮುಖರಾದ ವಿನೋದ್, ಡಿ.ಆರ್. ಸೋಮಶೇಖರ್, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ರಾಣು ಅಪ್ಪಣ್ಣ, ಸುಜಲ ದೇವಿ, ಹೋಬಳಿ ಘಟಕದ ನಲ ವಿಜಯ, ರುಬೀನ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಷತ್ ಸದಸ್ಯರಿಗೆ ಕೆಸರುಗದ್ದೆಯಲ್ಲಿ 100 ಮೀ ಓಟ, ಲೆಮನ್ ಸ್ಪೂನ್ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಕ್ರೀಡಾಕೂಟಕ್ಕೆ ಮುನ್ನ ಪರಿಷತ್ ಪದಾಧಿಕಾರಿಗಳು ಗದ್ದೆ ಆವರಣದಲ್ಲಿ ಗಿಡ ನೆಟ್ಟರು.

ಪರಿಷತ್‍ನ ಉಪಾಧ್ಯಕ್ಷ ಭರಮಣ್ಣ ಬೆಟಗೇರಿ ಸ್ವಾಗತಿಸಿದರು, ಕುಡೆಕಲ್ ಗಣೇಶ್ ವಂದಿಸಿದರು.ಕುಶಾಲನಗರ, ಆ. 8: ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ರೈತ ಪ್ರತಿನಿಧಿಗಳು ಕಾವೇರಿ ನೀರಾವರಿ ನಿಗಮದ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ ನೇತೃತ್ವದಲ್ಲಿ ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಕಛೇರಿ ಮುಂಭಾಗದಲ್ಲಿ ರೈತರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಹಾರಂಗಿ ಜಲಾಶಯ ಭರ್ತಿಯಾಗಿ ತಿಂಗಳು ಕಳೆದರೂ ಕಾಲುವೆಗೆ ನೀರು ಹರಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾಲುವೆಗಳ ಮೂಲಕ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ನೀರು ಬಳಕೆದಾರರ ಮಹಾಮಂಡಳದ ಉಪಾಧ್ಯಕ್ಷ ಎಂ.ದೇವರಾಜು, ಕಾರ್ಯದರ್ಶಿ ಚಂದ್ರಪ್ಪ, ಕಾವೇರಿ ಜಲಾನಯನ ಪ್ರದೇಶದ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಇದ್ದರು.