ಕುಶಾಲನಗರ, ಆ. 8: ಜೀವನದಿ ಕಾವೇರಿಯ ಸ್ವಚ್ಚತೆ ಹಾಗೂ ಸಂರಕ್ಷಣೆ ಬಗ್ಗೆ ಸ್ಥಳೀಯ ಆಡಳಿತಗಳು ಕಾಳಜಿ ವಹಿಸುವದು ಅಗತ್ಯವಾಗಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಕೇಚಪ್ಪನ ಮೋಹನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನೂಲ ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದ ಆರತಿ ಕ್ಷೇತ್ರದಲ್ಲಿ ನಡೆದ 68ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಾವೃಷ್ಟಿಯಿಂದಾಗಿ ಶುದ್ಧ ನೀರಿಗೆ ತತ್ವಾರ ಎದುರಾಗಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ನದಿ ಸಮುದ್ರ ಸೇರುವ ಪೂಂಪ್ ಹಾರ್ ತನಕ ಕಾವೇರಿ ನೀರಿನ ಬಳಕೆದಾರರು ನದಿ ಸಂರಕ್ಷಣೆ ಬಗ್ಗೆ ಚಿಂತನೆ ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಆತಂಕ ಎದುರಾಗಲಿದೆ ಎಂದರು.

ನದಿಯ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಳ್ಳುವದರೊಂದಿಗೆ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಬಳಸುವದು ಅಗತ್ಯವಾಗಿದೆ. ಆ ಮೂಲಕ ಕಾವೇರಿಯ ಋಣ ತೀರಿಸುವಲ್ಲಿ ಮುಂದಾಗಬೇಕಿದೆ ಎಂದರು.

ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಷ್ಟೋತ್ತರ, ಪೂಜಾ ವಿಧಿವಿಧಾನಗಳೊಂದಿಗೆ ಭಕ್ತಾದಿಗಳು ಜೀವನದಿಗೆ ಮಹಾ ಆರತಿ ಬೆಳಗಿದರು. ನೂಲಹುಣ್ಣಿಮೆ ದಿನದ ಮಹತ್ವದ ಬಗ್ಗೆ ಕೃಷ್ಣಮೂರ್ತಿ ಭಟ್ ಮಾಹಿತಿ ನೀಡಿದರು. ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು.

ಈ ಸಂದರ್ಭ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್‍ನ ಸುಬ್ಬಯ್ಯ, ಡಿ.ಆರ್. ಸೋಮಶೇಖರ್, ಶಿವಶಂಕರ್, ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಪದಾಧಿಕಾರಿ ಬೈಮನ ಭೋಜಮ್ಮ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಮುಖ ಬಿ.ಜೆ. ಅಣ್ಣಯ್ಯ, ಕರಾವಿಪ ಜಿಲ್ಲಾ ಘಟಕದ ಅಧ್ಯಕ್ಷ ಫಿಲಿಪ್‍ವಾಸ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕ ವನಿತಾ ಚಂದ್ರಮೋಹನ್, ಕರ್ನಾಟಕ ಕಾವಲುಪಡೆ ಘಟಕದ ಅಧ್ಯಕ್ಷ ಕೃಷ್ಣ, ಮಹಿಳಾ ಭಜನಾ ಮಂಡಳಿ ಪ್ರಮುಖರು ಮತ್ತು ಆರತಿ ಬಳಗದ ಸದಸ್ಯರು ಇದ್ದರು.

ಕುಶಾಲನಗರದ ಆದಿಶಂಕ ರಾಚಾರ್ಯ ಬಡಾವಣೆಯಲ್ಲಿ ಕಾವೇರಿ ನದಿಗೆ 56 ನೇ ಮಹಾಆರತಿ ಕಾರ್ಯಕ್ರಮ ಗಣಪತಿ ದೇವಾಲಯ ಮುಖ್ಯ ಅರ್ಚಕ ಆರ್.ಎಸ್. ಕಾಶೀಪತಿ ನೇತೃತ್ವದಲ್ಲಿ ನಡೆಯಿತ್ತು. ಕೊಪ್ಪ ಕಾವೇರಿ ಕ್ಷೇತ್ರದಲ್ಲಿ ರವಿಚಂದ್ರನ್ ಕನ್ನಡ ಸಂಘದ ಬಬೀಂದ್ರ ಪ್ರಸಾದ್ ಸಹೋದರರ ನೇತೃತ್ವದಲ್ಲಿ ಮಾತೆ ಕಾವೇರಿಗೆ ಅಭಿಷೇಕ ಹಾಗೂ ಆರತಿ ಬೆಳಗಲಾಯಿತು.