ವೀರಾಜಪೇಟೆ, ಆ. 9: 1947ರ ಆಗಸ್ಟ್ 14ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ರಾತ್ರಿಯೇ ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿ ದೇಶದ ವಿಭಜನೆಯಲ್ಲಿ ಭಾರತದ ಅಖಂಡ ಅನ್ಯಾಯ ಎಸಗಿರುವದರಿಂದ ಆಗಸ್ಟ್ 15 ಕರಾಳ ದಿನವನ್ನಾಗಿ ಹಿಂದು ಪರ ಸಂಘಟನೆಗಳು ಆಚರಿಸುತ್ತಿವೆ ರಾಜ್ಯದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ದೋ. ಕೇಶವಮೂರ್ತಿ ಹೇಳಿದರು.
ವೀರಾಜಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆಯಿಂದ ಇಂದು ಇಲ್ಲಿನ ಕಾವೇರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ ಸಪ್ತಾಹ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚದೆಯಿಂದ ಹೋರಾಡಿದ ಸುಮಾರು ಎರಡು ಲಕ್ಷ ಹಿಂದೂಗಳು ಬಲಿಯಾಗಿದ್ದಾರೆ. ಅಂದು ಅಧಿಕಾರಕ್ಕೆ ಬಂದ ನಾಯಕರುಗಳು ದೇಶವನ್ನು ವಿಭಜನೆ ಮಾಡಲು ಇತರ ಕೋಮುಗಳಿಗೆ ಪರೋಕ್ಷವಾಗಿ ಸಹಕರಿಸಿ ಹಿಂದೂಗಳನ್ನು ವಂಚಿಸಿದರಲ್ಲದೆ ಹಿಂದೂಗಳು ಅನ್ಯ ಕೋಮಿನ ಪಾಕಿಸ್ತಾನದೊಂದಿಗೆ ಇಂದು ನಿರಂತರ ಹೋರಾಡುವಂತೆ ಮಾಡಿದ್ದಾರೆ ಎಂದು ಟೀಕಿಸಿದರು. ಅಂದಿನ ನಾಯಕರುಗಳು ಹಿಂದೂಗಳನ್ನು ಗಮನಕ್ಕೆ ತೆಗೆದು ಕೊಳ್ಳಲಿಲ್ಲ. ಅಂದು ದೇಶ ಭಕ್ತ ಹಿಂದೂಗಳ ಹೃದಯಕ್ಕಾದ ಘೋರ ಗಾಯ ಇಂದಿಗೂ ಅಳಿದಿಲ್ಲ.ಹಿಂದುಗಳು ಸಂಘಟಿತರಾಗಿ ಹೋರಾಡುವಂತೆ ಕರೆ ನೀಡಿದರು.
ಬ್ರಿಟಿಷರು ಭಾರತ ಬಿಟ್ಟು ಹೋಗುವ ಮೊದಲು ಅಲ್ಪ ಸಂಖ್ಯಾತರು, ಹಿಂದೂಗಳು ಹಾಗೂ ಇತರ ಜನಾಂಗಗಳ ನಡುವೆ ಒಡೆದು ಆಳುವ ವಿಷ ಬೀಜ ಬಿತ್ತಿದ್ದರಿಂದ ಅಖಂಡ ಭಾರತದ ಶೇಕಡ 40ರಷ್ಟು ಜಾಗವನ್ನು ಕಳೆದುಕೊಳ್ಳಬೇಕಾಯಿತು. ಅಖಂಡ ಭಾರತವನ್ನು ಮತ್ತೆ ಒಗ್ಗೂಡಿಸಲು ಸುಭಾಷ್ ಚಂದ್ರ ಬೋಸ್ ಸೇರಿದಂತೆ ಆಯ್ದ ಹಿಂದೂ ಪರ ನಾಯಕರುಗಳ ಪ್ರಯತ್ನ ವಿಫಲವಾಯಿತು ಎಂದರು. ಪಾಕಿಸ್ತಾನ ಹಾಗೂ ಚೀನಾ ಭಾರತದ ಶತ್ರು ದೇಶಗಳಂತೆ ವರ್ತಿಸುತ್ತಿವೆ. ಕಾಶ್ಮೀರದಲ್ಲಿ ಕಿರುಕುಳ, ಗಡಿಯಲ್ಲಿ ಉಪಟಳ, ಭಯೊತ್ಪಾದನೆಗೆ ಕುಮ್ಮಕ್ಕು ನೀಡಿ ಪರೋಕ್ಷ ಯುದ್ಧದಲ್ಲಿ ಚೀನಾ ಹಾಗೂ ಪಾಕಿಸ್ಥಾನ ತೊಡಿಸಿಕೊಂಡಿದೆ. ಚೀನಾ ಸರಕುಗಳು ಭಾರತದ ಮಾರುಕಟ್ಟೆಯನ್ನು ಆವರಿಸಿದೆ. ಇದರಿಂದಲೂ ಆರ್ಥಿಕವಾಗಿ ಲಾಭsಗಳಿಸಿದ್ದು, ಆ ದೇಶದ ಉತ್ಪನ್ನ ತಿರಸ್ಕರಿಸುವಂತೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಚಾಲಕ ಪ್ರಿನ್ಸ್ ಗಣಪತಿ ಮಾತನಾಡಿ, ಹಿಂದೂ ಜಾಗರಣಾ ವೇದಿಕೆ ಸ್ವಾತಂತ್ರ್ಯೋತ್ಸವ ಆಚರಣೆಗೆ ಕೆಲವು ದಿನಗಳ ಮುನ್ನ ಪ್ರತಿ ವರ್ಷ ಅಖಂಡ ಭಾರತದ ಸಂಕಲ್ಪ ಸಪ್ತಾಹ ಆಚರಿಸುತ್ತದೆ ಎಂದು ಹೇಳಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಅಲ್ಲುಮಾಡ ಶರತ್ ಪೆಮ್ಮಯ್ಯ, ಸಂಚಾಲಕ ಬಿ.ಎನ್. ಯೋಗೀಶ್, ತಾಲೂಕು ಕಾರ್ಯದರ್ಶಿ ಎಂ.ಬಿ. ಚಂದ್ರನ್ ಉಪಸ್ಥಿತರಿದ್ದರು.
ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎನ್.ವಿ. ಸುನಿಲ್ ಕುಮಾರ್, ನಗರ ಸಮಿತಿ ಸಂಚಾಲಕ ಆರ್.ಸುರೇಶ್ ಹಾಜರಿದ್ದರು. ಸಂಘಟನೆಯ ಪ್ರಮುಖ ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭಕ್ಕೆ ಮುನ್ನ ಇಲ್ಲಿನ ತೆಲುಗರಬೀದಿಯ ಮಾರಿಯಮ್ಮ ದೇವಾಲಯದಿಂದ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಕಾವೇರಿ ಕಲ್ಯಾಣ ಮಂಟಪದವರೆಗೆ ವಾಹನ ಜಾಥಾವನ್ನು ಏರ್ಪಡಿಸಲಾಗಿತ್ತು.
ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಡಿವೈಎಸ್.ಪಿ ನಾಗಪ್ಪ, ಅವರ ನೇತೃತ್ವ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಅವರ ಮಾರ್ಗ ದರ್ಶನದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.