ಮಡಿಕೇರಿ, ಆ. 9: ಅರೆಭಾಷೆ - ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕೆಲಸ ಕಾರ್ಯಗಳು ಆಗಬೇಕಿವೆ, ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಕೆಲಸ ಕಾರ್ಯಗಳು ಮಾತ್ರವಲ್ಲದೆ ನೂತನವಾಗಿ ಆರಂಭಗೊಂಡ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಕಾರ್ಯ ಚಟುವಟಿಕೆಗಳಿಗೆ ರೂಪು-ರೇಷೆ ಕೊಟ್ಟ ತೃಪ್ತಿ ಇರುವದಾಗಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ನಿರ್ಗಮಿತ ಅಧ್ಯಕ್ಷ ಕೊಲ್ಯದ ಗಿರೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
2012ರಲ್ಲಿ ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಅರೆಭಾಷಾ ಅಕಾಡೆಮಿ ಸ್ಥಾಪನೆಯಾಗಿದ್ದು, ಆರಂಭದಲ್ಲಿ ಸಂಪಾಜೆಯ ಎನ್.ಎಸ್. ದೇವಿಪ್ರಸಾದ್ ಅವರು ಅಧ್ಯಕ್ಷರಾಗಿದ್ದರು. 2012 ರಿಂದ 2014ರ ತನಕ ಆರಂಭದಲ್ಲಿ ಗುರುತಿಸಿಕೊಳ್ಳುವಂತಹ ಯಾವದೇ ಚಟುವಟಿಕೆಗಳು ನಡೆಯಲಿಲ್ಲ. ಇದೇ ಅವಧಿಯಲ್ಲಿ ಸರಕಾರ ಬದಲಾದ ಸಂದರ್ಭ ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳೂ ಬದಲಾಗಿ ಕೊಲ್ಯದ ಗಿರೀಶ್ ಅವರು ಅರೆಭಾಷಾ ಅಕಾಡೆಮಿಯ ಎರಡನೇ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾದ ಬಳಿಕ ಮೂರು ವರ್ಷಗಳ ಅಧಿಕಾರಾವಧಿಯ ಕುರಿತು ಗಿರೀಶ್ ಅವರು ತಮ್ಮ ಅನುಭವವನ್ನು ‘ಶಕ್ತಿ’ ಸಂದರ್ಶನದಲ್ಲಿ ಹಂಚಿಕೊಂಡರು.
ಸದಸ್ಯರ ಆಯ್ಕೆ ವಿಚಾರದಲ್ಲಿ ಆರಂಭದಲ್ಲಿ ಗೊಂದಲ ಸೃಷ್ಟಿಯಾಯಿತು. ಸುಳ್ಯದಲ್ಲಿ ಪ್ರತಿಭಟೆನೆಯೂ ನಡೆಯಿತು. ಕೆಲವರು ರಾಜೀನಾಮೆ ನೀಡಿದ್ದರು ಈ ಬೆಳವಣಿಗೆಯಿಂದಾಗಿ ಪ್ರಾರಂಭಿಕ ಅಡಚಣೆಯಾದರೂ ನಿಧಾನಗತಿಯಲ್ಲಿ ಇದು ತಿಳಿಯಾಯಿತು. ರಾಜೀನಾಮೆ ನೀಡಿದವರ ಸ್ಥಾನಕ್ಕೆ ಹೊಸಬರ ನೇಮಕವಾಗಿ ಪ್ರಥಮ ಆಡಳಿತ ಮಂಡಳಿ ಸಭೆ ನಡೆದದ್ದು, 2015ರ ಫೆಬ್ರವರಿಯಲ್ಲಿ. ಇದಾದ ಬಳಿಕ ಎಲ್ಲವೂ ಸುಲಲಿತವಾಗಿ ನಡೆದು ಸಾಧ್ಯವಾದಷ್ಟು ಉತ್ತಮ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಗಿರೀಶ್ ತಮ್ಮ ಅನುಭವ ಹಂಚಿಕೊಂಡರು.
ಕೊಡಗು ಜಿಲ್ಲೆ ಸೇರಿದಂತೆ, ದೆಹಲಿ, ಮಂಗಳೂರು, ಬೆಂಗಳೂರು, ಮೈಸೂರು, ಪುತ್ತೂರು, ಸುಳ್ಯ ವಿಭಾಗದಲ್ಲಿ ಒಟ್ಟು 86 ಕಾರ್ಯಕ್ರಮಗಳನ್ನು ನಡೆಸಲಾಗಿದೆ. 17 ಪುಸ್ತಕ, 4 ಸಿ.ಡಿ. ಹೊರತರಲಾಗಿದೆ. ‘ಹಿಂಗಾರ’ ಹೆಸರಿನ ತ್ರೈಮಾಸಿಕ ಪತ್ರಿಕೆಯ 7 ಆವೃತ್ತಿಗಳನ್ನು ಹೊರತರಲಾಗಿದ್ದು, ಇದನ್ನು ನೋಂದಣಿಯೂ ಮಾಡಲಾಗಿದೆ. ಕೃಷಿಗೆ ಸಂಬಂಧಿಸಿ, ಅರೆಭಾಷೆ ಸಂಸ್ಕøತಿ ಆಚಾರ - ವಿಚಾರ, ಆಟಿ ಆಚರಣೆ, ಐನ್‍ಮನೆ ಕುರಿತ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಪರಿಚಯಿಸುವ ಪ್ರಯತ್ನ ನಡೆಸಲಾಗಿದೆ.
ಕೊಡವ ಅಕಾಡೆಮಿಯ ಮುಂದಾಳತ್ವದಲ್ಲಿ ನಡೆದ ಪಂಚ ಭಾಷಾ ಅಕಾಡೆಮಿಗಳ ಕಾರ್ಯಕ್ರಮ ಹಾಗೂ ರಾಜ್ಯ ವಿವಿಧ ಅಕಾಡೆಮಿಗಳನ್ನು ಒಳಗೊಂಡ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಸಹಕಾರ ನೀಡಲಾಗಿದೆ. ಸಾಂಪ್ರದಾಯಿಕ ಅಡುಗೆ ಕುರಿತ ಪುಸ್ತಕ, ಹುಟ್ಟು, ಸಾವು, ಹಬ್ಬಹರಿದಿನ ಕುರಿತು ಮಾಹಿತಿಯನ್ನೊಳಗೊಂಡ ಪುಸ್ತಕಗಳನ್ನು ದಾಖಲೆ ರೂಪದಲ್ಲಿ ಅಕಾಡೆಮಿಯ ಕೊನೆಯ ಕಾರ್ಯಕ್ರಮ (ಅ.11 ಹಾಗೂ 13)ದ ಸಂದರ್ಭ ಹೊರತರಲಾಗುತ್ತಿದೆ. ಸಂಸ್ಕøತಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ ದಾಖಲೆ ಮಾಡಲಾಗಿದೆ ಎಂದು ಅವರು ನಡೆಸಿರುವ ಚುಟುವಟಿಕೆಗಳ ಕುರಿತು ಹೇಳಿದರು.
(ಮೊದಲ ಪುಟದಿಂದ)
ಯಶಸ್ಸಿಗೆ ಪ್ರತಿಫಲ
ಕೊನೆಯ ಆರು ತಿಂಗಳಲ್ಲಿ ಅನುದಾನದ ಕೊರತೆಯಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದ ಅವರು, ಈ ತನಕ ಅರೆಭಾಷೆ ಅಕಾಡೆಮಿಗೆ ಇತರ ಅಕಾಡೆಮಿಗಳಿಗೆ ಸಿಗುತ್ತಿದ್ದ ಅನುದಾನದ ಶೇ. 50 ರಷ್ಟು ಮಾತ್ರ ಸಿಗುತ್ತಿತ್ತು. ಇನ್ನು ಮುಂದೆ ಇತರ ಅಕಾಡೆಮಿಗಳಿಗೆ ಸಿಗುವಷ್ಟೇ ಅನುದಾನ ಸಿಗಲಿದೆ. ಇದು ಮೂರು ವರ್ಷಗಳಲ್ಲಿ ನಡೆಸಿದ ಯಶಸ್ವಿ ಚಟುವಟಿಕೆಗೆ ದೊರೆಯುತ್ತಿರುವ ಪ್ರತಿಫಲ ಎಂದು ಗಿರೀಶ್ ಹರ್ಷ ವ್ಯಕ್ತಪಡಿಸಿದರು. - ಶಶಿ ಸೋಮಯ್ಯ