ಕುಶಾಲನಗರ, ಆ. 9: ಕೊಡಗು ಜಿಲ್ಲೆ ಮುಖ್ಯವಾಗಿ ಕಾಫಿ ಹಾಗೂ ಕರಿಮೆಣಸು ಬೆಳೆಯನ್ನು ಅವಲಂಬಿಸಿದೆ. ಕಾಫಿ ಬೆಳೆಯುವದು ಎಷ್ಟು ಮುಖ್ಯವೋ, ಸಂಸ್ಕರಣೆ ಮಾಡುವದು ಅಷ್ಟೇ ಪ್ರಮುಖವಾದ ಜವಾಬ್ದಾರಿ. ಸಂಸ್ಕರಣಾ ವಿಭಾಗದ ವಿದ್ಯಮಾನಗಳನ್ನು ಕೂಡ್ಲೂರುವಿನ ಕೆಲವು ಸಂಸ್ಕರಣಾ ಕೇಂದ್ರಗಳಿಗೆ ತೆರಳಿ ‘ಶಕ್ತಿ’ ವೀಕ್ಷಿಸಿ ಮಾಹಿತಿ ಪಡೆದಾಗ ಕಾಫಿ ಉದ್ಯಮವು ಕಾಫಿ ಸಂಸ್ಕರಣೆಯನ್ನು ಪೂರಕವಾಗಿ ಅವಲಂಬಿಸಿದೆ ಎನ್ನುವದು ಖಾತರಿಯಾಯಿತು.ವೆಸ್ಟರ್ನ್ ಕಾಫಿ ಕ್ಯೂರರ್ಸ್‍ನ ಬಿ.ಪಿ. ಸಚಿನ್ ಅವರ ಮಾಹಿತಿಯಂತೆ ಕಾಫಿ ಸಂಸ್ಕರಣೆಗೂ ಮುನ್ನ ಬೆಳೆಗಾರರು ಮತ್ತು ಕಂಪೆನಿಗಳಿಂದ ಖರೀದಿಸುವ ಕಚ್ಚಾ ಕಾಫಿಯ ತೇವಾಂಶ ಪರಿಶೀಲನೆ ಅತ್ಯಂತ ಪ್ರಮುಖ ಕಾರ್ಯವಾಗಿದೆ. ಕಚ್ಚಾ ಕಾಫಿಯಾದರೆ, ಶೇ. 13 ಕ್ಕಿಂತ ಕಡಿಮೆ ತೇವಾಂಶವಿರಬೇಕು. ಶುದ್ಧೀಕೃತ ಕಾಫಿಯಾದರೆ ಶೇ. 12 ಕ್ಕಿಂತ ತೇವಾಂಶ ಕಡಿಮೆ ಇರಬೇಕು. ಈ ಬಗ್ಗೆ ಬೆಳೆಗಾರರು ಗಮನಹರಿಸಿ ತೇವಾಂಶ ಮಿತಿಯನ್ನು ಉಳಿಸಿಕೊಳ್ಳಲು ಶ್ರಮ ವಹಿಸಿದರೆ, ಉತ್ತಮ ಬೆಲೆ ಲಭ್ಯವಾಗುತ್ತದೆ ಎಂದು ಸಚಿನ್ ಅಭಿಪ್ರಾಯಪಟ್ಟರು. ಸಂಸ್ಕರಣೆ ಬಳಿಕ ತಯಾರಾದ ಹಸಿರು ಕಾಫಿಯನ್ನು ಗುಣಮಟ್ಟದ ಆಧಾರದಲ್ಲಿ ವಿಂಗಡಣೆ ಮಾಡಿ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದ ಅವರು ಕೊಡಗಿನ ಕಾಫಿ ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‍ಎಲ್‍ಎನ್ ಕಂಪೆನಿಯ ಹಸಿರು ಕಾಫಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥನ್ ಅವರ ಪ್ರಕಾರ ಕೇಂದ್ರ
(ಮೊದಲ ಪುಟದಿಂದ) ಸರ್ಕಾರ ಜಾರಿಗೊಳಿಸಿರುವ ಜಿಎಸ್‍ಟಿ ತೆರಿಗೆ ವಿಧಾನ ಕಾಫಿ ಉದ್ಯಮಕ್ಕೆ ವರದಾನವಾಗಿದೆ. ಶೂನ್ಯ ತೆರಿಗೆ ಮೂಲಕ ಕಾಫಿ ವಹಿವಾಟನ್ನು ಚುರುಕುಗೊಳಿಸಿದೆ. ಹಿಂದಿನ ತೆರಿಗೆ ಪದ್ಧತಿಯ ಅಡಚಣೆಗಳು ದೂರವಾಗಿ ವಿಳಂಬ ರಹಿತವಾಗಿ ಕಾಫಿ ವಹಿವಾಟನ್ನು ನಿರ್ವಹಿಸಬಹು ದಾಗಿದೆ. ಆದರೆ ಇನ್ನೊಂದೆಡೆ ದಿಢೀರ್ ಕಾಫಿ (ಇನ್‍ಸ್ಟೆಂಟ್) ಉದ್ಯಮಕ್ಕೆ ಜಿಎಸ್‍ಟಿ ಹೊಡೆತ ನೀಡಿದೆ. ದಿಢೀರ್ ಕಾಫಿ ಮಾರಾಟದ ಮೇಲೆ ಶೇ. 28 ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಇದರಿಂದಾಗಿ ದಿಢೀರ್ ಕಾಫಿ ಮಾರಾಟ ಪ್ರಮಾಣ ಕುಸಿತಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ದಿಢೀರ್ ಕಾಫಿ ಖರೀದಿಸುವ ಗ್ರಾಹಕರಿಗೆ ಈ ಕಾಫಿ ದರ ದುಬಾರಿ ಯಾಗುವ ಅನಿವಾರ್ಯತೆ ಇದೆ.
ಆಶ್ಚರ್ಯವೆಂದರೆ ಈ ತೆರಿಗೆಯನ್ನು ಚಹಾ ವಹಿವಾಟಿಗೆ ವಿಧಿಸಿಲ್ಲ. ಇದರಿಂದಾಗಿ ಚಹಾ ವಹಿವಾಟು ಏರಿಕೆಗೊಳ್ಳುವ ಹಾಗೂ ಇದರಿಂದಾಗಿ ದಿಢೀರ್ ಕಾಫಿ ಮಾರಾಟಕ್ಕೆ ಹೆಚ್ಚಿನ ಹೊಡೆತ ಬೀಳುವ ಆತಂಕ ಎದುರಾಗಿದೆ ಎಂದು ವಿಶ್ವನಾಥನ್ ವಿವರಿಸಿದರು. ಎಸ್‍ಎಲ್‍ಎನ್ ದಿಢೀರ್ ಕಾಫಿ ಘಟಕದ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್ ಅವರ ಅನಿಸಿಕೆಯಂತೆ ದಿಢೀರ್ ಕಾಫಿಯನ್ನು ವಿವಿಧ ಗುಣಮಟ್ಟದ ವಿಂಗಡಣೆಯೊಂದಿಗೆ ಯಾಂತ್ರಿಕ ನೆರವಿನಿಂದ ತಯಾರಿಸಲಾಗುತ್ತದೆ. ಗ್ರಾಹಕರು ತಮಗೆ ಬೇಕಾದ ಗುಣಮಟ್ಟದ ಕಾಫಿಯನ್ನು ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಖರೀದಿಸುತ್ತಾರೆ. ಜೊತೆಗೆ ಬಹುತೇಕ ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತದೆ.
ಮಂಗಳೂರು ಬಂದರು ಮೂಲಕ ವಹಿವಾಟು
ಕೂಡ್ಲೂರುವಿನ ನೆಡ್‍ಕಾಫಿ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಅನಿಲ್ ಅವರು ಮಾಹಿತಿ ನೀಡಿ ಶೇಕಡ 70ರಷ್ಟು ಕಾಫಿಯನ್ನು ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದೀಗ ಮಂಗಳೂರು ಬಂದರು ಮೂಲಕ ಕಾಫಿಯನ್ನು ರಫ್ತು ಮಾಡಲು ಸುಲಭ ಸಾಧ್ಯವಾಗಿದೆ. ಸುಮಾರು 14 ರಿಂದ 22 ದಿನಗಳ ಕಾಲ ಹಡಗು ಮೂಲಕ ಕಾಫಿ ಉತ್ಪನ್ನಗಳು ವಿವಿಧ ದೇಶಗಳಿಗೆ ತಲುಪುತ್ತವೆ. ವಿದೇಶಿ ಮಾರುಕಟ್ಟೆಯ ದರವೇ ಭಾರತೀಯ ಕಾಫಿ ಮಾರಾಟ ದರವನ್ನು ಕೂಡ ನಿರ್ಣಯಿಸುವಷ್ಟು ಪ್ರಭಾವ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಮಾತ್ರವಲ್ಲದೆ ಚಿಕ್ಕಮಗಳೂರು, ಸಕಲೇಶಪುರ, ಹಾಸನಗಳಿಂದಲೂ ಕೊಡಗಿನ ಸಂಸ್ಕರಣಾ ಕೇಂದ್ರಗಳು ಕಚ್ಚಾ ಕಾಫಿಯನ್ನು ಪಡೆಯುತ್ತವೆ. ಇವುಗಳನ್ನು ಹಸಿರು ಕಾಫಿಯಾಗಿ ಸಂಸ್ಕರಣೆ ಮೂಲಕ ಪರಿವರ್ತಿಸಿ ಇಟಲಿ, ಜರ್ಮನಿ, ಸ್ಪೈನ್ ಮತ್ತು ಯುರೋಪಿಯನ್ ದೇಶಗಳಿಗೆ ರವಾನೆ ಮಾಡಲಾಗುತ್ತದೆ. ಇಟಲಿಯಲ್ಲಂತೂ ಇತರ ಸಾಮಗ್ರಿಗಳಂತೆ ವಿವಿಧ ಗುಣಮಟ್ಟದ ಕಾಫಿಯನ್ನು ಅನೇಕ ಮಾರಾಟ ಮಳಿಗೆಗಳ ಮೂಲಕ ಮಾರಾಟಗೊಳಿಸುವದನ್ನು ವೀಕ್ಷಿಸಿದಾಗ ಅಲ್ಲಿನ ಜನರಿಗೆ ಕಾಫಿ ಪಾನೀಯದ ಪ್ರೀತಿ ಕಂಡು ಬರುತ್ತದೆ. ದಿಢೀರ್ ಕಾಫಿ ತಯಾರಿಕೆಯ ಶೇ. 80 ರಷ್ಟು ಪ್ರಮಾಣವನ್ನು ನೆಸ್ಲೆ ಕಂಪೆನಿ ತಯಾರಿಸುತ್ತಿದ್ದು, ಮುಖ್ಯವಾಗಿ ಅಧಿಕ ರೋಬಸ್ಟಾ ಕಾಫಿಯನ್ನು ಖರೀದಿಸುತ್ತಿದೆ. ಕೊಡಗಿನ ಎಲ್ಲಾ ಸಂಸ್ಕರಣಾ ಕೇಂದ್ರಗಳು ನೇರವಾಗಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದು, ಬೆಳೆಗಾರರು ಇದರಿಂದ ಪ್ರಯೋಜನ ಹೊಂದಿದ್ದಾರೆ ಎಂದು ಅನಿಲ್ ಸಂತಸ ವ್ಯಕ್ತಪಡಿಸಿದರು.
ಎರಡು ಕಡೆ ತೆರಿಗೆ ಹೊರೆ
ಕೂಡ್ಲೂರುವಿನಲ್ಲಿ ಅಸ್ತಿತ್ವದಲ್ಲಿರುವ ಸಂಸ್ಕರಣಾ ಕೇಂದ್ರಗಳಿಗೆ ಎರಡು ಕಡೆ ತೆರಿಗೆಯ ಹೊರೆ ಬೀಳುತ್ತಿದೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ನಿವೇಶನಗಳಲ್ಲಿ ಸುಮಾರು 15 ಸಂಸ್ಕರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ನಾಲ್ಕೈದು ಬೃಹತ್ ಕಂಪೆನಿಗಳಿದ್ದು, ಫ್ರಾನ್ಸ್‍ನ ಪ್ಯಾರಿಸ್ ಆಡಳಿತದಲ್ಲಿಯೂ ಒಂದು ಕಂಪೆನಿ ಸ್ಥಾಪನೆಗೊಂಡಿದೆ. ಆದರೆ ಕೈಗಾರಿಕಾ ಅಭಿವೃದ್ಧಿ ಮಂಡಳಿಯು ನಿರ್ವಹಣೆಗೆಂದು ಸಂಸ್ಕರಣಾ ಕೇಂದ್ರಗಳಿಂದ ವಾರ್ಷಿಕ ತೆರಿಗೆ ವಸೂಲಿ ಮಾಡುತ್ತಿದೆ. ಆದರೆ ಇದುವರೆಗೂ ಮಂಡಳಿ ರಸ್ತೆ ದುರಸ್ತಿ ಅಥವಾ ಯಾವದೇ ಅಭಿವೃದ್ಧಿಗಳನ್ನು ಕೈಗೊಂಡಿಲ್ಲ. ಈ ಕೆಲಸವನ್ನು ಅಲ್ಲಲ್ಲಿ ಸಂಸ್ಕರಣಾ ಕೇಂದ್ರಗಳೇ ಸ್ವತಹ ಖರ್ಚು ಮಾಡಿ ನಿರ್ವಹಿಸುತ್ತಿವೆ. ಇನ್ನೊಂದೆಡೆ ಕೂಡ್ಲೂರು ಪಂಚಾಯಿತಿ ವತಿಯಿಂದಲೂ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಇವರಿಗೆ ಕಾನೂನಾತ್ಮಕ ಅವಕಾಶವಿದೆಯೇ ಎಂಬದು ಇನ್ನೂ ಖಾತರಿಗೊಂಡಿಲ್ಲ. ಕೂಡ್ಲೂರುವಿನ ಉದ್ಯಮಿಗಳಿಗೆ ಎರಡು ಕಡೆ ತೆರಿಗೆ ಪಾವತಿಸುವ ತಲೆನೋವು ಪ್ರತೀ ವರ್ಷ ಕಾಡುತ್ತಿದೆ ಎಂದು ಅನಿಲ್ ಬೇಸಕ ವ್ಯಕ್ತಪಡಿಸಿದರು.
ಈ ಕುರಿತು ಕೂಡ್ಲೂರು ಪಂಚಾಯಿತಿ ಅಧ್ಯಕ್ಷೆ ಅಯೆಷಾ ಅವರನ್ನು ‘ಶಕ್ತಿ’ ಪ್ರಶ್ನಿಸಿದಾಗ ಕೂಡ್ಲೂರುವಿನಲ್ಲಿ ಸಂಸ್ಕರಣಾ ಕೇಂದ್ರಗಳು ಸೇರಿದಂತೆ ಇನ್ನಿತರ ಅನೇಕ ಉದ್ಯಮಗಳು ಕೈಗಾರಿಕಾ ಬಡಾವಣೆಯಲ್ಲಿವೆ. ಆದರೆ ಸುಮಾರು ರೂ. 74 ಲಕ್ಷ ತೆರಿಗೆ ಪೈಕಿ ಇದುವರೆಗೆ ಕೇವಲ ರೂ. 7ಲಕ್ಷ ಮಾತ್ರ ಸಂಗ್ರಹವಾಗಿದೆ. ಒತ್ತಡ ಹೇರಿದರೂ ಹಣ ಬರುತ್ತಿಲ್ಲ. ಸದ್ಯದಲ್ಲೇ ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವದಾಗಿ ‘ಶಕ್ತಿ’ಗೆ ತಿಳಿಸಿದರು.