ಮಡಿಕೇರಿ ಆ. 9: ಪುತ್ರನ ಸಾವಿನ ಕಾರಣದಿಂದ ಹೆಗ್ಗಳ ಗ್ರಾಮದ ಬೂದಿಮಾಳದಲ್ಲಿ ಜಾನ್ ಡಿಸೋಜ ಎಂಬುವವರು ತಮ್ಮ ಸ್ವಂತ ನಿವೇಶನದಲ್ಲಿ ಸಣ್ಣದೊಂದು ಸ್ಮಾರಕ ನಿರ್ಮಿಸಿಕೊಂಡಿದ್ದಾರೆಯೇ ಹೊರತು ಅದು ಚರ್ಚ್ ಅಥವಾ ಗುಡಿಯಲ್ಲವೆಂದು ಸ್ಪಷ್ಟಪಡಿಸಿರುವ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಐ.ಆರ್. ದುರ್ಗಾಪ್ರಸಾದ್, ಶಾಸಕ ಕೆ.ಜಿ. ಬೋಪಯ್ಯ ಹಾಗೂ ಬಿಜೆಪಿಯ ನಡೆ ಖಂಡನೀಯವೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಅಡಿ ವಿಸ್ತೀರ್ಣದಲ್ಲಿ ಮುರುಕಲು ಕಲ್ಲಿನಿಂದ ನಿರ್ಮಿಸಿರುವ ಸಣ್ಣದೊಂದು ಸ್ಮಾರಕವನ್ನು ವಿವಾದವನ್ನಾಗಿ ಪರಿವರ್ತಿಸಿರುವದು ಮತ್ತು ಈ ವಿಚಾರದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ನಡೆದುಕೊಳ್ಳುತ್ತಿರುವ ರೀತಿಯನ್ನು ಟೀಕಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರ ವಿರೋಧವಿಲ್ಲದಿದ್ದರೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವ ಬಿಜೆಪಿ ಪ್ರವೃತ್ತಿಯಾಗಿದೆ ಎಂದು ಆರೋಪಿಸಿದರು.
ಸಣ್ಣ ಸ್ಮಾರಕದ ವಿಚಾರವನ್ನು ಮುಂದಿಟ್ಟುಕೊಂಡು ಜಾನ್ ಡಿಸೋಜ ಅವರಿಗೆ ಸೇರಿದ ಸುಮಾರು ಎರಡೂವರೆ, ಮೂರು ಎಕರೆ ಭೂಮಿಯನ್ನು ವಶಕ್ಕೆ ಪಡೆದು ಬಡವರಿಗೆ ಹಂಚುವಂತೆ ಶಾಸಕ ಕೆ.ಜಿ. ಬೋಪಯ್ಯ ಆದೇಶ ಮಾಡಿದ್ದಾರೆ. ಐದು ಎಕರೆ ಒಳಗಿನ ಭೂಮಿಯನ್ನು ಯಾವದೇ ಕಾರಣಕ್ಕು ತೆರವುಗೊಳಿಸಬಾರದೆಂದು ಈ ಹಿಂದೆÀ ಒತ್ತಡ ಹೇರಿದ್ದ ಅವರು ಇದೀಗ ಮೂರು ಎಕರೆ ಭೂಮಿಯನ್ನು ಬಡವರಿಗೆ ಹಂಚುವಂತೆ ಆದೇಶಿಸಿರುವದು ಯಾಕೆ ಎಂದು ದುರ್ಗಾಪ್ರಸಾದ್ ಪ್ರಶ್ನಿಸಿದರು. ತಮ್ಮ ಪಕ್ಷದಲ್ಲಿರುವವರಿಗೆ ಒಂದು ಕಾನೂನು, ಮತ್ತೊಬ್ಬರಿಗೆ ಮತ್ತೊಂದು ಕಾನೂನು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಎಲ್ಲಾ ಸರಕಾರಿ ಭೂಮಿಯನ್ನು ಸರ್ವೆ ಮಾಡಿ ಬಡವರಿಗೆ ಹಂಚುವಂತೆ ಶಾಸಕ ಬೋಪಯ್ಯ ಅವರು ಅಧಿಕಾರಿಗಳಿಗೆ ಆದೇಶ ಮಾಡಲಿ ಎಂದು ಸವಾಲು ಹಾಕಿದ ದುರ್ಗಾಪ್ರಸಾದ್ ಬಿಜೆಪಿ ಮತ್ತು ಬಿಜೆಪಿ ಶಾಸಕರ ದ್ವಂದ್ವ ನಿಲುವುಗಳ ಬಗ್ಗೆ ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.
ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ಪರಿಸರ ವಲಯ ಸೇರಿದಂತೆ ಇನ್ನೂ ಅನೇಕ ವಿಚಾರಗಳಲ್ಲಿ ಕೇಂದ್ರ ಸರಕಾರದಿಂದ ಕೊಡಗಿಗೆ ಅನ್ಯಾಯವಾಗಿದೆ. ಇದನ್ನು ಮರೆ ಮಾಚುವದಕ್ಕಾಗಿ ಇಂಥ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸಿಪಿಐಎಂ ಪ್ರಮುಖರಾದ ಎ.ಸಿ. ಸಾಬು ಹಾಗೂ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.