ಮಡಿಕೇರಿ, ಆ. 9: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ. 29 ಲಕ್ಷ ಅನುದಾನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಿಧಿ ವತಿಯಿಂದ ಜಿಲ್ಲಾಸ್ಪತ್ರೆಗೆ ಇದೇ ಮೊದಲ ಬಾರಿಗೆ ‘ಹೈಟೆಕ್ ಆಂಬ್ಯುಲೆನ್ಸ್ ಬಂದಿದ್ದು, ಇಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೀಯನ್ನು ನೀಡುವ ಮೂಲಕ ಚಾಲನೆ ನೀಡಿದರು.
ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ಸಿಗುವ ಎಲ್ಲಾ ಸೌಲಭ್ಯವನ್ನು ಆ ಆಂಬ್ಯುಲೆನ್ಸ್ ಒಳಗೊಂಡಿದೆ. ಐಸಿಯು, ಆಕ್ಸಿಜನ್, ಹೃದಯಾಘಾತವಾದ ರೋಗಿಗಳಿಗೆ ಅಗತ್ಯವಾಗಿ ಬೇಕಾದ ‘ಶಾಕ್ ಚಿಕಿತ್ಸೆ’ ಅಪಘಾತಗಳು ಸಂಭವಿಸಿ ತಲೆಗೆ ಗಂಭೀರ ಗಾಯವಾದರೆ, ಬೆನ್ನು ಮೂಳೆ ಮುರಿದರೆ ವ್ಯಕ್ತಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ಬೇಕಾದ ವ್ಯವಸ್ಥೆಯು ಈ ವಾಹನದಲ್ಲಿದೆ. ಅಪಘಾತ, ಬೆಂಕಿ ಅನಾಹುತಗಳು ಸಂಭವಿಸಿದರೆ ಗಾಯಾಳುವನ್ನು ಕೈಯಿಂದ ಎತ್ತಲಾಗದ ಪರಿಸ್ಥಿತಿ ನಿರ್ಮಾಣ ಗೊಂಡರೆ ಅಂತಹ ಗಾಯಾಳುವನ್ನು ಸಾಗಿಸಲು ‘ಸ್ಕೂಪ್ ಸ್ಟ್ರಚರ್’ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ನಾಲ್ಕು ವಿಧದ ‘ಹಾರ್ನ್’, ಮೈಕ್ ವ್ಯವಸ್ಥೆ ಇರುವ ಈ ಆಂಬ್ಯುಲೆನ್ಸ್‍ನಲ್ಲಿ ಓರ್ವ ಚಾಲಕ, ಪ್ಯಾರಮೆಡಿಕಲ್ ಸಿಬ್ಬಂದಿ ಸೇವೆಗೆ ಸಿದ್ಧರಿರುತ್ತಾರೆ. ವೈದ್ಯರ ಅಗತ್ಯವಿದ್ದಲ್ಲಿ ಓರ್ವ ವೈದ್ಯರನ್ನು ಕೂಡ ಒದಗಿಸಲಾಗುತ್ತದೆ.
ತುರ್ತು ಪ್ರಕರಣಗಳಿಗೆ ಮಾತ್ರ
ಈ ಹೈಟೆಕ್ ಆಂಬ್ಯುಲೆನ್ಸ್ ವ್ಯವಸ್ಥೆ ತೀರಾ ತುರ್ತು ಪ್ರಕರಣಗಳಿಗೆ ಮಾತ್ರ ಸೇವೆಗೆ ಲಭ್ಯವಿರುತ್ತದೆ. ಸಾಧಾರಣ ಹಾಗೂ ಸಣ್ಣಪುಟ್ಟ ಪ್ರಕರಣಗಳಿಗೆ ಈ ಆಂಬ್ಯುಲೆನ್ಸ್‍ನ್ನು ನೀಡುವದಿಲ್ಲ. ಯಾವದೇ ಪ್ರಕರಣವಾದರೂ ವೈದ್ಯರು ಪರಿಶೀಲಿಸಿ ಹೈಟೆಕ್ ಆಂಬ್ಯುಲೆನ್ಸ್‍ನ ಅನಿವಾರ್ಯತೆ ಇದ್ದರೆ ಅದನ್ನು ಖಚಿತಪಡಿಸುತ್ತಾರೆ. ಅಂತಹ ಪ್ರಕರಣಗಳಿಗೆ ಮಾತ್ರ ಈ ವಾಹನ ಲಭ್ಯ.(ಮೊದಲ ಪುಟದಿಂದ)
ಎಲ್ಲರಿಗೂ ಉಚಿತವಲ್ಲ
ಹೈಟೆಕ್ ಆಂಬ್ಯುಲೆನ್ಸ್ ಪರಿಶಿಷ್ಟ ಜಾತಿ-ಪಂಗಡಗಳಿಗೆ ಉಚಿತವಾಗಿ ಸೇವೆ ನೀಡುತ್ತದೆ. ಆದರೆ ಸೂಕ್ತ ದಾಖಲಾತಿ ಒದಗಿಸಬೇಕು. ಉಳಿದಂತೆ ಬಿಪಿಎಲ್ ಕಾರ್ಡ್‍ನ ಹಾಗೂ ರಿಯಾಯಿತಿ ದರದಲ್ಲಿ ಸೇವೆ ದೊರಕಲಿದೆ. ಎಷ್ಟೆಷ್ಟು ಶುಲ್ಕ ವಿಧಿಸಬೇಕು ಎಂಬ ಬಗ್ಗೆ ಪರಿಶೀಲಿಸಿ ಉನ್ನತ ಮಟ್ಟದಲ್ಲಿ ಚರ್ಚಿಸಿ ನಿಗದಿಪಡಿಸುವದಾಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಮಹೇಂದ್ರ ತಿಳಿಸಿದ್ದಾರೆ.
ಸದುಪಯೋಗಕ್ಕೆ ಕರೆ
ಹೈಟೆಕ್ ಆಂಬ್ಯುಲೆನ್ಸ್‍ಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಅಪ್ಪಚ್ಚು ರಂಜನ್, ಎಲ್ಲಾ ರೀತಿಯ ಸೌಕರ್ಯವಿರುವ ಈ ಆಂಬ್ಯುಲೆನ್ಸ್ ಅನ್ನು ಸದುಪಯೋಗಪಡಿಸಿಕೊಳ್ಳುವಂತಾಗಬೇಕೆಂದು ಕರೆ ನೀಡಿದರು. ವೈದ್ಯರೊಂದಿಗೆ ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು. ವೈದ್ಯರೂ ಕೂಡ ಸಾರ್ವಜನಿಕರಿಗೆ ಸೂಕ್ತ ಸ್ಪಂದನ ನೀಡಬೇಕೆಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಆರ್.ವಿ. ಡಿಸೋಜಾ, ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಜಿಲ್ಲಾ ಸರ್ಜನ್ ಡಾ. ಅಜೀಜ್, ಜಿಲ್ಲಾಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ, ಅಧೀಕ್ಷಕ ಬಸವರಾಜ್ ಮತ್ತಿತರರು ಇದ್ದರು.