ಕೂಡಿಗೆ, ಆ. 8: ಕುಶಾಲನಗರದ ವರ್ತಕರೊಬ್ಬರು ತನ್ನ ಅಂಗಡಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ನೀರು ಸರಬರಾಜು ಕಾಮಗಾರಿಗಾಗಿ 2014ನೇ ಸಾಲಿನಲ್ಲಿ ಸುಮಾರು 3,21,943 ಲಕ್ಷ ರೂ, ಗಳ ಸಾಮಗ್ರಿಗಳನ್ನು ನೀಡಿದ್ದು, ಇದುವರೆಗೂ ಹಣ ಬರಲಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ, ಆಗಿನಿಂದ ಇಂದಿನ ವರೆಗೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಯ ಏಳು ಅಭಿವೃದ್ಧಿ ಅಧಿಕಾರಿಗಳಿಗೆ, ಪಂಚಾಯಿತಿ ಹಣಕಾಸು ವಿಭಾಗಕ್ಕೆ ಸಂಬಂಧಪಡುವ ಅಧಿಕಾರಿಗಳು ಹಾಗೂ 2014ರ ಸಮಯದಲ್ಲಿದ್ದ ಚುನಾಯಿತ ಆಡಳಿತ ಮಂಡಳಿ ಮತ್ತು ಈಗಿನ ಅವಧಿಯಲ್ಲಿರುವ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಒಟ್ಟು 55 ಜನರ ವಿರುದ್ಧ ಕುಶಾಲನಗರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.
ನಗರದ ರಥಬೀದಿಯಲ್ಲಿರುವ ಅನಿಲ್ ಸ್ಟೋರ್ ಹಾರ್ಡ್ವೇರ್ ಅಂಗಡಿಯಿಂದ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ 2014-15ನೇ ಸಾಲಿನಲ್ಲಿ ಸುಮಾರು 2,55,154 ರೂ ಮೊತ್ತದ ಸಾಮಗ್ರಿಗಳನ್ನು ನೀಡಿದ್ದು, ಹಾಗಾಗಿ ತನಗೆ ಬರಬೇಕಾದ ಸಂಪೂರ್ಣ ವಸ್ತುಗಳ ಬಿಲ್ 2,55,154 ರೂ. ಗೆ ಶೇ.12 ರಷ್ಟು ಬಡ್ಡಿ 63,789, ತಿಳುವಳಿಕೆ ಪತ್ರದ ಶುಲ್ಕ 2,000, ವಾದಪತ್ರ ತಯಾರಿಕಾ ಪತ್ರ 1000 ರೂ. ಸೇರಿದಂತೆ ಒಟ್ಟು 3,21,943 ಪಾವತಿಸುವಂತೆ ನ್ಯಾಯಾಲಯದಲ್ಲಿ ಹೂಡಿದ್ದಾರೆ.
ಇಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ತುರ್ತು ಸಭೆಯಲ್ಲಿ ಈ ವಿಚಾರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದಾಗ ಸದಸ್ಯರುಗಳೆಲ್ಲಾ ಕಸಿವಿಸಿಗೊಂಡರು. ಇಂದಿನ ಆಡಳಿತ ಮಂಡಳಿಯವರು ಈ ವಿಷಯ ತಮಗೆÉ ಸಂಬಂಧಪಡದಿದ್ದರೂ ನಮ್ಮ ಆಡಳಿತ ಮಂಡಳಿಗೆ ನ್ಯಾಯಾಲಯದಲ್ಲಿ ದಾವೆ ಹೂಡಿರುವದು ಸರಿಯಾದ ಕ್ರಮವಲ್ಲ ಎಂದು ಚರ್ಚೆ ನಡೆಸಿದರು.
ಈ ವಿಷಯವಾಗಿ ಗ್ರಾಮ ಪಂಚಾಯಿತಿಯವರನ್ನು ಸುದ್ದಿಗಾರರು ಸಂಪರ್ಕಿಸಿದಾಗ ಹಾರ್ಡ್ವೇರ್ ಅಂಗಡಿಯಿಂದ ನೀರು ಸರಬರಾಜಿಗೆ ಸಂಬಂಧಿಸಿದಂತೆ ವಿವಿಧ ಉಪಕರಣಗಳ ಜೋಡಣ ಪದಾರ್ಥಗಳಿಗೆ ಹಾಗೂ ಪೈಪ್ಗಳಿಗೆ ಬೇಕಾಗುವಂತಹ ಹಣವನ್ನು ಚೆಕ್ ರೂಪದಲ್ಲಿ ಅವರ ಖಾತೆಗೆ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.