ಕುಶಾಲನಗರ, ಆ. 9: ಉತ್ತಮ ಚಿಂತನೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ಮೂಡಿಸುವತ್ತ ಯುವ ಸಮೂಹ ಕಾರ್ಯೋನ್ಮುಖವಾಗ ಬೇಕಿದೆ ಎಂದು ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸೋಮಯ್ಯ ಹೇಳಿದರು.
ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಘಟಕದ ಆಶ್ರಯದಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಚನ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಕೆಲವರಿಂದ ಸಮಾಜದ ದಿಕ್ಕು ತಪ್ಪಿಸುವ ಚಿಂತನೆಗಳು ಹೆಚ್ಚುತ್ತಿವೆ.
ಬಾಂಧವ್ಯ ಹಾಗೂ ದೂರದೃಷ್ಠಿಯ ಕೊರತೆಯಿಂದಾಗಿ ಪ್ರತಿಯೊಬ್ಬರ ನಡುವಿನ ಅಂತರ ಹೆಚ್ಚುತ್ತಿದೆ. 12ನೇ ಶತಮಾನದಲ್ಲಿ ಶರಣರು ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಶ್ರಮಿಸಿದ್ದರು. ಅಂತಹ ದಾರ್ಶನಿಕರ, ತತ್ವ ಪುರುಷರ ಆದರ್ಶಗಳು, ಚಿಂತನೆಗಳು ಇಂದಿನ ಸಮಾಜಕ್ಕೆ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಶರಣರ ವಚನಗಳ ಸಾರವನ್ನು ಅರಿತು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಅದರಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.
ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಉದ್ಘಾಟಿಸಿದರು. ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಸದಾಶಿವ ಪಲ್ಲೇದ್, ಶರಣ ಸಾಹಿತ್ಯ ಪರಿಷತ್ ನಿರ್ದೇಶಕ ಶುಭಶೇಖರ್ ಇದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶರಣರ ವಿವಿಧ ವಚನಗಳ ಗಾಯನ ನಡೆಯಿತು.