ಕುಶಾಲನಗರ, ಆ. 9 : ಸಿದ್ದಲಿಂಗಪುರ ವ್ಯಾಪ್ತಿಯ ಗಡಿಕಲ್ ಗ್ರಾಮದಲ್ಲಿ ನೂತನ ಮದ್ಯದಂಗಡಿ ತೆರೆಯಲು ಅನುಮತಿ ಕಲ್ಪಿಸಬಾರದು ಎಂದು ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅರಿಶಿನಗುಪ್ಪೆ, ಸಿದ್ದಲಿಂಗಪುರ, ಅಳಿಲುಗುಪ್ಪೆ, ರಂಗಯ್ಯನಕೊಪ್ಪಲು ಗ್ರಾಮದ ಸುಮಾರು 50 ಕ್ಕೂ ಅಧಿಕ ಗ್ರಾಮಸ್ಥರು ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿ ತಲೆ ಎತ್ತಲಿರುವ ಮದ್ಯದಂಡಿಗೆ ಅನುಮತಿ ಕಲ್ಪಿಸಬಾರದು. ಕಲ್ಪಿಸಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ತೊರೆನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಬಿ.ದೇವರಾಜು, ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಮದ್ಯದಂಗಡಿ ಆರಂಭವಾದಲ್ಲಿ ಹಲವಾರು ಕುಟುಂಬಗಳು ಬೀದಿ ಪಾಲಾಗಲಿವೆ. ಸುತ್ತಮುತ್ತ ಮೀಸಲು ಅರಣ್ಯ, ಪರಿಶಿಷ್ಟ ಜಾತಿ ಕಾಲನಿಯಿದ್ದು ಈ ಭಾಗದಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ಕಲ್ಪಿಸಬಾರದು ಎಂದು ಆಗ್ರಹಿಸಿದರು.
ಇದೇ ಸಂದರ್ಭ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಶಾಸಕ ಅಪ್ಪಚ್ಚುರಂಜನ್ ಅವರಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಸಮಸ್ಯೆ ಬಗ್ಗೆ ಅಬಕಾರಿ ಆಯುಕ್ತರು ಹಾಗೂ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳ ಲಾಗುವದು ಎಂದು ಭರವಸೆ ನೀಡಿದರು. ಈ ಸಂದರ್ಭ ಪ್ರತಿಭಟನಾ ನಿರತರ ಪೈಕಿ ಜೋಸೆಫ್ ಎಂಬಾತ ಮದ್ಯದಂಗಡಿ ಅವಶ್ಯಕತೆಯಿರುವ ಬಗ್ಗೆ ಶಾಸಕರಲ್ಲಿ ನಿವೇದಿಸಿಕೊಂಡ ಘಟನೆಯೂ ಕಂಡುಬಂತು.
ಪ್ರತಿಭಟನಾ ನಿರತ ಸ್ಥಳಕ್ಕೆ ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ ಎ. ಕೋಟೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ. ಗ್ರಾಮಸ್ಥರಾದ ಎಂ.ಎನ್.ಬೋಪಯ್ಯ, ಬಿ.ಸಿ. ಮಂಜುನಾಥ್, ಎ.ಎಸ್. ರಾಮಣ್ಣ, ರೋಹಿ, ಧಲೋಕ್ ಕುಮಾರ್, ಆಂಟನಿ, ಪಿ.ಡಿ. ರವಿಕುಮಾರ್, ಬಿ.ಎಚ್.ಆನಂದ ಮತ್ತಿತರರು ಇದ್ದರು.