ಗೋಣಿಕೊಪ್ಪ, ಆ. 9: ರಕ್ತದಾನ ಮಹಾದಾನವಾಗಿದ್ದು ಜನತೆ ಹೆಚ್ಚು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಸಹಕಾರಿ ಯಾಗುವಂತೆ ಕಾನೂರಿನ ಕಾಫಿ ಬೆಳೆಗಾರ ಚೆಪ್ಪುಡೀರ ಪಿ. ಪೂಣಚ್ಚ ಕರೆ ನೀಡಿದರು. ಕಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ಬೃಹತ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಆಗಿಂದಾಗ್ಗೆ ನಡೆಯಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಟ್ಟಂಗಡ ಪ್ರಕಾಶ್ ವಾಣಿಜ್ಯ ನಗರ ಗೋಣಿಕೊಪ್ಪಲಿನಲ್ಲಿ ರಕ್ತದಾನ ಕೇಂದ್ರ ಸ್ಥಾಪನೆಯಾಗಬೇಕು ಇದರಿಂದ ದೂರದ ಜಿಲ್ಲಾ ಕೇಂದ್ರಕ್ಕೆ ರೋಗಿಗಳು ಹೋಗುವದು ತಪ್ಪುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಪಂಚಾಯಿತಿ, ಏಡ್ಸ್ ನಿಯಂತ್ರಣ ಘಟಕ, ರಕ್ತನಿಧಿ ಕೇಂದ್ರ ಮಡಿಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾನೂರು, ಬಲ್ಯಮುಂಡೂರು, ಕೆ. ಬಾಡಗ, ಕಾನೂರು, ಕುಟ್ಟ,ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ಥಳೀಯ ದಾನಿಗಳಾದ ಚೆರಿಯಪಂಡ ಈಶ್ ಬೆಳ್ಯಪ್ಪ, ಮಾಚೀಮಾಡ ಉತ್ತಪ್ಪ ಸೇರಿದಂತೆ ಕಾನೂರು ಮಹಿಳಾ ಸಮಾಜದ ಅಧ್ಯಕ್ಷೆ ದೇವಮಾಜಿ ತಮ್ಮಯ್ಯ, ಉಪಾಧ್ಯಕ್ಷೆ ಸ್ವಾತಿ ಭೀಮಯ್ಯ, ಕಾರ್ಯದರ್ಶಿ ರೂಪ ಸತೀಶ್, ಜಂಟಿ ಕಾರ್ಯದರ್ಶಿ ನಿರ್ಮಲ ದಿನೇಶ್, ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಕುಮಾರಿ. ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಬಾಡಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕೆ.ಎಂ. ಮಡಿಕೇರಿಯ ಡಾ. ಪ್ರಿಯದರ್ಶಿನಿ ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ. ಸದಸ್ಯ ಅಸಮಾಧಾನ

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಮಡಿಕೇರಿಯ ಆರೋಗ್ಯ ಕೇಂದ್ರದ ವೈಖರಿ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲಿ ಇಂತಹ ಉತ್ತಮ ಶಿಬಿರಗಳು ನಡೆಸುವ ಸಂಘ-ಸಂಸ್ಥೆಗಳು ರಕ್ತವನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಕಳುಹಿಸಿಕೊಡುತ್ತಾರೆ. ಆದರೆ ಗ್ರಾಮೀಣ ಭಾಗದ ಜನತೆ ಜಿಲ್ಲಾಸ್ಪತ್ರೆಗೆ ತೆರಳಿ ರಕ್ತಕ್ಕೆ ಬೇಡಿಕೆ ಸಲ್ಲಿಸಿದಾಗ ಅಲ್ಲಿಯ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.