ಮಡಿಕೇರಿ, ಆ. 9: ನಗರದ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಿರಿಯ ಬಾಲಕ - ಬಾಲಕಿಯರ ವಸತಿ ನಿಲಯದ ಮಕ್ಕಳಿಗೆ ಮಾಂಸಾಹಾರ ಇತ್ಯಾದಿ ಭಕ್ಷ್ಯಗಳನ್ನು ಹೊಟೇಲ್‍ನಿಂದ ತರಿಸಿ ಉಣಬಡಿಸುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಲಭಿಸಿದ ಖಚಿತ ಸುಳಿವಿನ ಮೇರೆಗೆ ಇಂದು ಮುಸ್ಸಂಜೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಈ ಅಂಶ ಬಹಿರಂಗಗೊಂಡಿತು.

(ಮೊದಲ ಪುಟದಿಂದ) ಜಿ.ಪಂ. ಪ್ರಮುಖರ ಭೇಟಿ ಬೆನ್ನಲ್ಲೇ ವಿದ್ಯಾರ್ಥಿ ನಿಲಯ ಸಿಬ್ಬಂದಿ ಗಲಿಬಿಲಿಗೊಂಡು, ರಾತ್ರಿ ಭೋಜನ ವ್ಯವಸ್ಥೆ ಬಗ್ಗೆ ಉತ್ತರಿಸಲು ತಡವರಿಸಿದರಲ್ಲದೆ, ಪ್ರಬಾರ ಮೇಲ್ವಿಚಾರಕ ಮಂಜುನಾಥ ಈ ರಾತ್ರಿ ಮೀನು ಊಟಕ್ಕಾಗಿ, ಕಾವಲುಗಾರ ಕಾರ್ತಿಕ್ ಮಾರುಕಟ್ಟೆಗೆ ತೆರಳಿರುವದಾಗಿ ಉತ್ತಿರಿಸಿದೆ. ಅತ್ತ ಅಡುಗೆಕೋಣೆಗೆ ತೆರಳಿದಾಗ ಅನ್ನ, ಚಪಾತಿ ಮಾತ್ರ ತಯಾರಿಸಿಟ್ಟಿದ್ದ ಅಡುಗೆಯಾತ ರವಿ, ಇಂದು ರಾತ್ರಿ ಮೊಟ್ಟೆ ಸಾಂಬಾರು ತಯಾರಿಸುರವದಾಗಿಯೂ, ಕಾರ್ತಿಕ್ ಮೊಟ್ಟೆ ತರಲು ಅಂಗಡಿಗೆ ತೆರಳಿದ್ದಾಗಿ ನುಣುಚಿಕೊಂಡ.

ಹಾಗಾದರೆ ಈ ಹೊತ್ತಿನಲ್ಲಿ ಎಲ್ಲಿಂದ ಮೀನು ತರುತ್ತೀರಿ? ಎಂದು ಜಿ.ಪಂ. ಪ್ರಮುಖರು ಪ್ರಶ್ನಿಸುತ್ತಿರು ವಾಗಲೇ ಕಾರ್ತಿಕ್ ಅಲ್ಲಿ ಪ್ರತ್ಯಕ್ಷನಾದ. ಎಲ್ಲೋ ಹೋಗಿದ್ದೆ? ಎಂದು ಪ್ರಶ್ನಿಸಲಾಗಿ ಆತ ಮಂಜುನಾಥನೆಡೆಗೆ ದೃಷ್ಟಿ ಹರಿಸಿ, ತಾನು ರಾತ್ರಿ ಕಾವಲು ಸಿಬ್ಬಂದಿ ಎಂದ. ಇತ್ತ ಮಹಿಳಾ ನೌಕರ ರೊಬ್ಬಳು ತಾನು ಹೊಸಬಳು ಸ್ವಾಮಿ, ಹೊಟೇಲ್‍ನಿಂದ ಬರುವ ಆಹಾರ ಮಕ್ಕಳಿಗೆ ಕೊಡುವದಾಗಿ ಹೇಳಿದ ಳಾದರೂ, ತೀರಾ ಗಾಬರಿಯಿಂದ ತನಗೇನೂ ಗೊತ್ತಿಲ್ಲ ಎಂದು ಮಾರ್ನುಡಿದಳು. ದಾಸ್ತಾನು ಕೊಠಡಿ ಎಲ್ಲಿ ಎಂದು ಪ್ರಶ್ನಿಸಿದಾಗ, ವಿದ್ಯಾರ್ಥಿಗಳು ಓದುತ್ತಿದ್ದ ಪಡಶಾಲಲೆಯಲ್ಲಿ ಒಂದಿಷ್ಟು ಬಾಡಿ ಹೋಗಿದ್ದ ತರಕಾರಿ ಕಣ್ಣಿಗೆ ಬಿತ್ತು. ಈ ಬಗ್ಗೆ ಜಿ.ಪಂ. ಪ್ರಮುಖರು ಬೊಟ್ಟು ಮಾಡಿದಾಗ, ಎಲ್ಲವೂ ಸಂಬಂಧಿಸಿದ ಅಧಿಕಾರಿ ಜಯಲಕ್ಷ್ಮೀ ಬಾಯಿ ನೋಡಿಕೊಳ್ಳುತ್ತಿದ್ದು, ಯಾವದೂ ಟೆಂಡರ್ ಆಗಿಲ್ಲವೆಂದು ಮಂಜುನಾಥ ಬಹಿರಂಗಗೊಳಿಸಿದ.

ಒಟ್ಟಿನಲ್ಲಿ ವಸತಿ ನಿಲಯದ 30 ಬಾಲಕರು ಹಾಗೂ 14 ಬಾಲಕಿಯರಿಗೆ ಈ ವಿದ್ಯಾರ್ಥಿ ನಿಲಯದಲ್ಲಿ ಸಮರ್ಪಕ ಆಹಾರ, ಶೌಚಾಲಯ ಇತ್ಯಾದಿ ಮೂಲಭೂತ ಸೌಕರ್ಯ ಕೊರತೆಯಿಂದ ಜಿ.ಪಂ. ಪ್ರಮುಖರು ಕೂಡ ಅಚ್ಚರಿಯೊಂದಿಗೆ ವಿಷಾದ ವ್ಯಕ್ತಪಡಿಸುತ್ತಾ, ಮೇಲಧಿಕಾರಿಗಳು ಹಾಗೂ ಸರಕಾರದ ಗಮನ ಸೆಳೆದು ಅಗತ್ಯ ವ್ಯವಸ್ಥೆಯ ಭರವಸೆ ನೀಡಿದರು. ಅಲ್ಲದೆ ಕರ್ತವ್ಯ ನಿಮಿತ್ತ ಬೆಂಗಳೂರಿಗೆ ತೆರಳಿರುವರೆನ್ನಲಾದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಹಿಂತಿರುಗಿದ ಬಳಿಕ ಕರೆ ಮಾಡುವಂತೆ ಜಿ.ಪಂ. ಅಧ್ಯಕ್ಷರು ಸಿಬ್ಬಂದಿಗೆ ನಿರ್ದೇಶಿಸಿದರು.