ಮಡಿಕೇರಿ, ಆ. 9: ನಗರದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಇಂದು ದಿಢೀರ್ ಭೇಟಿ ನೀಡಿದ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಅಲ್ಲಿನ ಕುಂದುಕೊರತೆ ಪರಿಶೀಲಿಸಿ ಸೂಕ್ತ ಕ್ರಮ ಭರವಸೆ ನಿಡಿದರು.
ನಗರದ ವಿಜಯ ವಿನಾಯಕ ಬಡಾವಣೆ ಬಳಿಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ವಿಜು ಸುಬ್ರಮಣಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಸರಾಸರಿ 50 ಮಂದಿ ವಿದ್ಯಾರ್ಥಿನಿಯರ ಈ ವಸತಿ ನಿಲಯದಲ್ಲಿ ಸುಮಾರು 100 ಮಂದಿ ಹೆಣ್ಣು ಮಕ್ಕಳು ಆಶ್ರಯ ಪಡೆದಿದ್ದು, ರಾತ್ರಿ ತಂಗಲು ತೊಂದರೆ ಆಗುತ್ತಿರು ವದಾಗಿ ಅಳಲು ತೋಡಿಕೊಂಡರು.
ವಸತಿ ನಿಲಯದಲ್ಲಿ ಸಂಖ್ಯೆ ಅಧಿಕವಿರುವದರಿಂದ ಊಟ ಮಾಡುವದು ಹಾಗೂ ಮಲಗುವದು ತೊಂದರೆ ಆಗುತ್ತಿದ್ದು, ಮೂಲಭೂತ ಸೌಲಭ್ಯಗಳು ಮತ್ತು ಸ್ವಚ್ಛತೆ, ನೀರು ಆಹಾರ ವ್ಯವಸ್ಥೆಗೆ ತೊಂದರೆ ಯಿಲ್ಲವೆಂದು ವಿದ್ಯಾರ್ಥಿನಿಯರು ಗಮನ ಸೆಳೆದರು.
ಜಿ.ಪಂ. ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಜತೆಗೆ ಚರ್ಚಿಸಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳುವದಾಗಿ ಈ ವೇಳೆ ಅವರು ಭರವಸೆ ನೀಡಿದರಲ್ಲದೆ, ಆದಷ್ಟು ಬೇಗ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಮಾರ್ನುಡಿದರು.
ಆ ಬಳಿಕ ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿನಿಯರ ನಿಲಯಕ್ಕೆ ಭೇಟಿ ನೀಡಿದ ಸ್ಥಾಯಿ ಸಮಿತಿಯ ಅಧ್ಯಕ್ಷರು ಅಲ್ಲಿನ ಹೆಣ್ಣು ಮಕ್ಕಳ ವಸತಿ ವ್ಯವಸ್ಥೆ ಹಾಗೂ ಆಹಾರ, ಕುಡಿಯುವ ನೀರಿನ ಸೌಲಭ್ಯ ಸ್ವಚ್ಛತೆ ಇತ್ಯಾದಿ ಬಗ್ಗೆ ಪರಿಶೀಲನೆ ನಡೆಸಿದರು.
ಹಲವು ಸಮಸ್ಯೆ : ಅನಂತರದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ತೆರಳಿದಾಗ ಹಲವಷ್ಟು ಸಮಸ್ಯೆಗಳು ಎದುರಾದವಲ್ಲದೆ, ಸಿಬ್ಬಂದಿಗಳು ಸಮರ್ಪಕವಾಗಿ ಗಮನ ಹರಿಸಬೇಕೆಂದು ಸೂಚಿಸಿದರು.
ವಿದ್ಯಾರ್ಥಿನಿಯರು ತಮ್ಮ ಕೊಠಡಿಗಳನ್ನು ಸರಿಯಾಗಿ ನಿರ್ವಹಿಸದಿರುವದು ಮತ್ತು ಅಚ್ಚು ಕಟ್ಟಾಗಿ ನೋಡಿಕೊಳ್ಳದಿರುವದು ಒಂದೆಡೆಯಾದರೆ, ಕಿರಿಯ ತರಗತಿಗಳ ವಿದ್ಯಾರ್ಥಿನಿಯರ ಕೋಣೆಗಳಲ್ಲಿ ಅಚ್ಚು ಕಟ್ಟುತನ ಗೋಚರಿಸಿತು. ಈ ಬಗ್ಗೆ ಮೇಲ್ವಿಚರಕರಿಗೆ ಲಿಖಿತ ನಿರ್ದೇಶನ ನೀಡಿದ ವಿಜು ಸುಬ್ರಮಣಿ ಹಾಸ್ಟೆಲ್ಗೆ ಸಿ.ಸಿ. ಕ್ಯಾಮರಾ ಅಳವಡಿಸಬೇಕೆಂದು ಸೂಚಿಸಿದರು.
ಅಲ್ಲದೆ ಹೆಣ್ಣು ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡುವಂತೆ ನಿಗಾವಿಡಲು ಸೂಚಿಸಿದ ಅವರು, ಆಹಾರದ ಗುಣಮಟ್ಟ ಕಾಪಾಡಿ ಕೊಂಡು ವೇಳಾಪಟ್ಟಿಯಂತೆ ಪದಾರ್ಥ ಗಳನ್ನು ರುಚಿಕರವಾಗಿ ತಯಾರಿಸಿ ನೀಡಬೇಕೆಂದು ತಿಳಿ ಹೇಳಿದರು.
ಕಟ್ಟಿರುವ ಜನರೇಟರ್ : ಈ ವಿದ್ಯಾರ್ಥಿ ನಿಲಯದಲ್ಲಿ ಹಳೆಯ ಶಿಥಿಲಗೊಂಡಿರುವ ಕಟ್ಟಡಗಳ ನಡುವೆ ವಾಸವಿರುವ ಹೆಣ್ಣು ಮಕ್ಕಳಿಗೆ ರಾತ್ರಿ ವಿದ್ಯುತ್ ಕೈ ಕೊಟ್ಟರೆ ಬೆಳಕಿನ ವ್ಯವಸ್ಥೆ ಸಮರ್ಪಕವಿಲ್ಲವೆಂದು ದೂರಿದರು. ಜನರೇಟರ್ ಕೆಟ್ಟುಹೋಗಿ ಹಲವು ತಿಂಗಳು ಕಳೆದಿದ್ದು, ಸಂಬಂಧಪಟ್ಟವರು ಹಲವು ಬಾರಿ ದೂರು ನೀಡಿದರೂ ಸ್ಪಂದಿಸಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇಲ್ಲಿ ಮಕ್ಕಳ ಹಾಜರಾತಿ, ಆಹಾರ ವೇಳಾಪಟ್ಟಿ, ದೈನಂದಿನ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿಯುಳ್ಳ ದಾಖಲೆಗಳನ್ನು ನಿರ್ವಹಿಸಬೇಕೆಂದು ವಿಜು ಸುಬ್ರಮಣಿ ಸೂಚಿಸಿದರು.
ವಿವಿಧ ಇಲಾಖೆಗಳ ಅಧೀನದಲ್ಲಿರುವ ಈ ವಿದ್ಯಾರ್ಥಿನಿಯರ ವಸತಿ ನಿಲಯಗಳು ಬೇಕು - ಬೇಡಿಕೆಗಳ ಕುರಿತ ಆಯ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆಗಳನ್ನು ಪರಿಹರಿಸಲಾಗುವದು ಎಂದು ಅವರು ಭೇಟಿ ಸಂದರ್ಭ ಆಶ್ವಾಸನೆ ನೀಡಿದರು.