ಸೋಮವಾರಪೇಟೆ,ಆ. 9: ವೃದ್ಧಾಪ್ಯ ವೇತನ ನೀಡಲೂ ಸಹ ಸರ್ಕಾರದ ಬಳಿ ಹಣವಿಲ್ವಾ? ಈ ಪ್ರಶ್ನೆಯನ್ನು ನೂರಾರು ಮಂದಿ ವಯೋವೃದ್ಧರು ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಯನ್ನು ಕೇಳುತ್ತಿದ್ದಾರೆ. ಇದೇ ಪ್ರಶ್ನೆಯನ್ನು ಶಾಸಕರು ಅಧಿಕಾರಿಯನ್ನು ಕೇಳಿದರೆ ಖಜಾನೆಗೆ ಅನುದಾನ ಬಂದಿಲ್ಲ ಸಾರ್ ಎನ್ನುತ್ತಿದ್ದಾರೆ. ಸೋಮವಾರಪೇಟೆ ಖಜಾನಾಧಿಕಾರಿಗಳ ಕಚೇರಿಗೆ ದಿನನಿತ್ಯ ಕನಿಷ್ಟವೆಂದರೂ ಹತ್ತಾರು ಮಂದಿ ವೃದ್ಧಾಪ್ಯ ವೇತನಕ್ಕಾಗಿ ಅಲೆದಾಡುತ್ತಿದ್ದಾರೆ. ಇವರುಗಳಿಗೆ ಏನೇನೋ ಸಬೂಬು ಹೇಳಿ ಅಧಿಕಾರಿಗಳು ಸಾಗಹಾಕುತ್ತಿದ್ದಾರೆ. ತಾಲೂಕಿನ ಹಿರಿಯ ಜಾನಪದ ಕಲಾವಿದ, ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿರುವ ಕೊಡ್ಲಿಪೇಟೆ ಹೋಬಳಿ, ಕೊರಗಲ್ಲು ಗ್ರಾಮದ ಹೆಮ್ಮನೆ ಹೆಚ್.ಎಂ. ರುದ್ರಪ್ಪ ಅವರಿಗೆ ಕಳೆದ ನಾಲ್ಕು ತಿಂಗಳಿನಿಂದ ವೃದ್ಧಾಪ್ಯ ವೇತನ ಲಭಿಸುತ್ತಿಲ್ಲ.
ಈ ಬಗ್ಗೆ ಶಾಸಕರ ಕಚೇರಿಗೆ ಆಗಮಿಸಿದ್ದ ರುದ್ರಪ್ಪ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, “ನನಗೆ ಎರಡೂ ಕಣ್ಣು ಕಾಣೋದಿಲ್ಲ. ದುಡಿಯೋಕೆ ಆಗುವದಿಲ್ಲ. ಕಣ್ಣು ಕಾಣದವರಿಗೆ ಯಾರು ಕೆಲಸ ಕೊಡ್ತಾರೆ. ವೃದ್ಧಾಪ್ಯ ವೇತನ 1200 ತಿಂಗಳಿಗೆ ಬರುತ್ತಿತ್ತು. ಕಳೆದ ನಾಲ್ಕು ತಿಂಗಳಿನಿಂದ ಬಂದಿಲ್ಲ. ನನ್ನ ಹೆಂಡತಿಗೂ ಕ್ಯಾನ್ಸರ್. ಆಕೆಯ ಚಿಕಿತ್ಸಾ ವೆಚ್ಚ. ಹೊಟ್ಟೆಪಾಡಿಗೆ ತುಂಬಾ ಕಷ್ಟ. ಒಂದು ತಿಂಗಳು ಹಣ ಬಂದಿಲ್ಲಾಂದ್ರೆ ಹೊಟ್ಟೆ ತುಂಬಿಸೋಕೆ ಕಷ್ಟ ಆಯ್ತದೆ. ಅಧಿಕಾರಿಗಳು ಕೇಳಿದ ದಾಖಲೆ ಗಳನ್ನೆಲ್ಲಾ ಕೊಟ್ಟಿದ್ದೀನಿ. ಬ್ಯಾಂಕ್‍ಗೆ ಹೋಗಿ ಕೇಳಿದ್ರೆ ಹಣ ಬಂದಿಲ್ಲ ಅಂತಾರೆ. ನಮ್ಮ ಕಷ್ಟ ಯಾರಿಗೆ ಹೇಳೋಣ?” ಎಂದು ಪ್ರಶ್ನಿಸಿದರು.
ತಾಲೂಕು ತಹಶೀಲ್ದಾರ್ ಕಚೇರಿಯಿಂದ ಉಪಖಜಾನಾಧಿ ಕಾರಿಗಳ ಕಚೇರಿಗೆ ಪ್ರತಿ ತಿಂಗಳು ಪತ್ರ ಕಳುಹಿಸುತ್ತಿದ್ದು, ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಮಂಜೂರಾದ ಆದೇಶ ಪ್ರತಿಗಳನ್ನು ರದ್ದುಪಡಿಸುವ ಸಂಬಂಧ ಸೂಚನೆ ನೀಡಿದ್ದು, ಇದುವರೆಗೂ ತಾಲೂಕಿನಲ್ಲಿ ಕನಿಷ್ಟ 6 ಸಾವಿರ ಮಂದಿಗೆ ವಿವಿಧ ಪಿಂಚಣಿ ಹಣ ಸ್ಥಗಿತಗೊಂಡಿದೆ.
2016-17ನೇ ಸಾಲಿನಲ್ಲಿ ಗ್ರಾಮಲೆಕ್ಕಿಗರ ಭೌತಿಕ ಪರಿಶೀಲನೆ ನಡೆಸಿ ಮರಣ ಹೊಂದಿರುವವರು, ಊರಿನಲ್ಲಿ ಇಲ್ಲದೇ ಇರುವವರ ಬಗ್ಗೆ ಮಾಹಿತಿ ನೀಡಿದ್ದು, ಅದರ ವರದಿಯ ಆಧಾರದ ಮೇರೆ ಬಿಎಂಎಸ್ ತಂತ್ರಾಂಶದಲ್ಲಿ ಅನರ್ಹ ಫಲಾನುಭವಿಗಳನ್ನು ರದ್ದುಪಡಿಸ ಲಾಗಿದೆ. ಇಂತಹ ಫಲಾನುಭವಿಗಳ ಹೆಸರನ್ನು ಉಪಖಜಾನೆಯ ತಂತ್ರಾಂಶದಿಂದಲೂ ರದ್ದುಪಡಿಸ ಬೇಕೆಂದು ತಹಶೀಲ್ದಾರ್ ಕಚೇರಿಯಿಂದ ಪತ್ರ ನೀಡಲಾಗಿದೆ.
ಆದರೆ ಗ್ರಾಮ ಲೆಕ್ಕಿಗರ ಭೌತಿಕ ಸರ್ವೆಯಲ್ಲಿಯೇ ಕೆಲವೊಂದು ಲೋಪಗಳು ಉಂಟಾಗಿರುವ ಹಿನ್ನೆಲೆ ಬದುಕಿರುವವರೂ, ಅದೇ ಊರಿನಲ್ಲಿ ರುವವರು ದಿನಕ್ಕೆ ಕನಿಷ್ಟವೆಂದರೂ 25 ಮಂದಿ ಖಜಾನೆಗೆ ಆಗಮಿಸಿ ವಿಚಾರಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ 730 ಮಂದಿಯ ಹೆಸರನ್ನು ತಂತ್ರಾಂಶದಿಂದ ಕೈಬಿಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಭೌತಿಕ ಸರ್ವೆ ಸಮರ್ಪಕವಾಗಿಲ್ಲದಿರುವ ದರಿಂದ ಅರ್ಹ ಫಲಾನುಭವಿಗಳೂ ಸಹ ಸರ್ಕಾರದ ಯೋಜನೆಯಿಂದ ವಂಚಿತ ರಾಗಬೇಕಾಗಿದೆ. ಈ ಬಗ್ಗೆ ಸಂಬಂಧಿ ಸಿದವರು ಗಮನಹರಿಸುವ ಮೂಲಕ ವೃದ್ಧರ ಸಹಾಯಕ್ಕೆ ನಿಲ್ಲಬೇಕಾಗಿದೆ.