ಮಡಿಕೇರಿ, ಆ. 9: ಖಾಸಗಿಯಾಗಿ ಸೋಲಾರ್ ಬೇಲಿ ಅಳವಡಿಸಿಕೊಳ್ಳುವ ರೈತರಿಗೆ ಅರಣ್ಯ ಇಲಾಖೆಯಿಂದ ಸಿಗಬೇಕಾದ ಶೇ. 50ರ ಸಹಾಯಧನವನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳುವದಾಗಿ ವನ್ಯಜೀವಿ ವಿಭಾಗದ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಪೊನ್ನಟ್ಟಿ ಶ್ರೀಧರ್ ಅವರು ಭರವಸೆ ನೀಡಿದ್ದಾರೆ.

ಶ್ರೀಮಂಗಲ ಸನಿಹದ ಬೀರುಗ ಗ್ರಾಮದಲ್ಲಿ ಇತ್ತೀಚೆಗೆ ಉಪ್ಪಾರರ ಶಶಿಧರ್ (ಕಿಟ್ಟ) ಅವರ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಹುಲಿ ಧಾಳಿ ನಡೆಸಿದ ಸ್ಥಳಕ್ಕೆ ಹಾಗೂ ಹುಲಿ ಹಿಡಿಯಲು ಬೋನ್ ಅಳವಡಿಸಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿದ್ದ ಅವರು ಕಾರ್ಯಾಚರಣೆ ಕುರಿತು ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭ ಸ್ಥಳೀಯರಾದ ಅಜ್ಜಮಾಡ ಚಂಗಪ್ಪ ಅವರು ಶ್ರೀಮಂಗಲ ವಿಭಾಗದಲ್ಲಿ ಇಲಾಖಾ ಯೋಜನೆಯಂತೆ ಸಹಾಯಧನದ ಆಧಾರದಲ್ಲಿ ಸೋಲಾರ್ ಬೇಲಿ ಅಳವಡಿಸಲು ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಈ ಹಿಂದೆ ಅರ್ಜಿ ಸಲ್ಲಿಸಿ ಕೆಲಸ ಪೂರ್ಣಗೊಳಿಸಿದವರಿಗೆ ಇನ್ನೂ ಸಹಾಯಧನ ಬಿಡುಗಡೆ ಯಾಗದಿರುವ ಕುರಿತು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಸಿಸಿಎಫ್ ಶ್ರೀಧರ್ ಅವರು ಈ ಬಗ್ಗೆ ಕ್ರಮಕೈಗೊಳ್ಳುವದಾಗಿ ಭರವಸೆಯಿತ್ತರು. ಅಲ್ಲದೆ ಜಾನುವಾರು ಕಳೆದುಕೊಂಡ ವರಿಗೆ ತಕ್ಷಣ ಪರಿಹಾರ ಒದಗಿಸ ಲಾಗುವದು ಎಂದು ಹೇಳಿದರು. ಜಾನುವಾರು ಮೇಲೆ ಧಾಳಿ ನಡೆಸುತ್ತಿ ರುವ ಹುಲಿಯನ್ನು ಹಿಡಿಯಲು ಕಳೆದ ಐದಾರು ದಿನಗಳಿಂದ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಲಿ ಧಾಳಿ ನಡೆಸಿದ ಸ್ಥಳ ಹಾಗೂ ಬೋನ್ ಅಳವಡಿಸಿರು ವದನ್ನು ಉನ್ನತಾಧಿಕಾರಿ ಖುದ್ದಾಗಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.

ಈ ಸಂದರ್ಭ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಡಿಎಫ್‍ಓ, ಎಂ.ಎ. ಜಯ, ಎಸಿಎಫ್‍ಗಳಾದ ಮರಿಯಾ ಕ್ರಿಸ್ಟರಾಜ್, ಸೀಮಾ, ಆರ್‍ಎಫ್‍ಓ ಗಳಾದ ವೀರೇಂದ್ರ, ಉತ್ತಪ್ಪ, ಸ್ಥಳೀಯರಾದ ಅಯ್ಯಮಾಡ ಸೋಮಯ್ಯ, ಉಪ್ಪಾರರ ಶಶಿಧರ್ (ಕಿಟ್ಟ) ಹಾಜರಿದ್ದರು.