ಕೂಡಿಗೆ, ಆ. 9: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಪುರಾತನ ಕಾಲದ ಆನೆ ತರಬೇತಿ ಕೇಂದ್ರವೊಂದು ಪಾಳು ಬಿದ್ದಿರುವುದು ಕಂಡುಬಂದಿದೆ. ಈ ಆನೆ ತರಬೇತಿ ಕೇಂದ್ರವು ಈ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಹುದುಗೂರು ಮೀಸಲು ಅರಣ್ಯ, ಬೆಂಡೆಬೆಟ್ಟ ಅರಣ್ಯ, ಜೇನುಕಲ್ಲು ಬೆಟ್ಟ ಅರಣ್ಯ ಸೇರಿದಂತೆ ಸಮೀಪದಲ್ಲೆ ಸೋಮವಾರಪೇಟೆ ವಲಯದ ಅರಣ್ಯ, ಬಾಣವಾರ ವಲಯಾರಣ್ಯ ಹೊಂದಿಕೊಂಡಿದೆ. ಮೊದಲು ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದ ಸಂದರ್ಭ ಸರಕಾರದ ಆದೇಶದನ್ವಯ ಆನೆಗಳನ್ನು ಹಿಡಿದು ಪಳಗಿಸುವ ಕಾರ್ಯವು ಈ ಜಾಗದಲ್ಲಿ ನಡೆಯುತ್ತಿತ್ತು. ಅಲ್ಲದೆ ಸಾಕಾನೆಗಳನ್ನೂ ಸಾಕಲಾಗುತ್ತಿತ್ತು. ಕಳೆದ 10 ವರ್ಷದ ಹಿಂದೆ ದುಬಾರೆಗೆ ಇಲ್ಲಿನ ಆನೆಗಳನ್ನು ಸ್ಥಳಾಂತರಿಸಲಾಗಿದೆ. ಇದೀಗ ಹುದುಗೂರಿನಲ್ಲಿರುವ ಆನೆ ತರಬೇತಿ ಕೇಂದ್ರದಲ್ಲಿ ಸಾಕಾನೆಯ ಮನೆ, ಆನೆಗೆ ಬೇಕಾಗುವ ಆಹಾರ ತಯಾರಿಸುವ ಬೃಹತ್ತಾದ ಅಡುಗೆ ಮನೆ, ಆನೆಗಳಿಗೆ ಉಪಯೋಗಿಸುತ್ತಿದ್ದ ಉಪಕರಣಗಳು, ಆಹಾರ ನೀಡುವ ವಸ್ತುಗಳನ್ನು ಸಂಗ್ರಹಿಸುವ ಬೃಹತ್ತಾದ ಮರದ ಪೆಟ್ಟಿಗೆ, ಮಾವುತರ ವಸತಿ ನಿಲಯಗಳು ಪಾಳು ಬಿದ್ದಿವೆ.
ವಿಶೇಷವಾಗಿ ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ವಿಕ್ರಮ ಮತ್ತು ಪ್ರಶಾಂತ ಎಂಬ ಆನೆಗಳು ಮೈಸೂರು ದಸರಾದಲ್ಲಿ ಪಾಲ್ಗೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹರಿಸಿ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪುನರಾರಂಭಿಸಲು ಚರ್ಚೆ ನಡೆದಿದೆ ಎಂದು ಗ್ರಾಮಸ್ಥರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹುದುಗೂರು ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವದರಿಂದ ಬೆಂಕಿ ನಿರ್ವಹಣೆ, ಒಣಗಿದ ಮರಗಳನ್ನು ಸಾಗಾಣಿಕೆ ಮಾಡಿ ಹುದುಗೂರು ಅರಣ್ಯ ಕೇಂದ್ರದಲ್ಲಿ ಸಂಗ್ರಹಣೆ ಮಾಡಲು ಈ ಆನೆಗಳಿಂದ ಅನುಕೂಲವಾಗುತ್ತಿತ್ತು. ಈ ತರಬೇತಿ ಕೇಂದ್ರವನ್ನು ಪುನರಾರಂಭಿಸುವಂತೆ ಈ ವ್ಯಾಪ್ತಿಯ ಗ್ರಾಮಸ್ಥರು ಸೇರಿದಂತೆ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
- ನಾಗರಾಜಶೆಟ್ಟಿ