ಮಡಿಕೇರಿ, ಆ. 9 : ಬಿಜೆಪಿಯ ಅಧಿಕಾರ ದಾಹ ಮಿತಿ ಮೀರಿರುವದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧÀಕ್ಕೆಯಾಗುತ್ತಿದೆ ಎಂದು ಟೀಕಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟೂ ಮೊಣ್ಣಪ್ಪ, ಗುಜರಾತ್‍ನಲ್ಲಿ ಅಹಮ್ಮದ್ ಪಟೇಲ್ ಅವರಿಗೆ ದೊರೆತಿರುವ ಗೆಲುವು ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಗುಜರಾತ್‍ನಲ್ಲಿ ನಡೆದ ರಾಜ್ಯಸಭಾ ಚುನಾಚಣೆಯಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದ್ದ ಬಿಜೆಪಿ ಹಣಬಲ ಮತ್ತು ತೋಳ್ಬಲ ಪ್ರದರ್ಶಿಸುವ ಮೂಲಕ ಕೀಳು ಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದೆ. ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಕುತಂತ್ರ ನಡೆಸಿ ಇದೀಗ ಫಲಿತಾಂಶ ಬಂದ ನಂತರ ಹತಾಶಗೊಂಡಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಸ್ತಿಗಳ ಮೇಲೆ ಐಟಿ ದಾಳಿ ನಡೆಸುವ ಮೂಲಕ ರಾಜಕೀಯ ಷಡ್ಯಂತ್ರ ನಡೆಸಲಾಯಿತು. ಈ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಅಹಮ್ಮದ್ ಪಟೇಲ್ ಅವರು ಗೆಲುವು ಸಾಧಿಸಿರುವದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಜಯವಾಗಿದೆ ಮತ್ತು ಬಿಜೆಪಿಗೆ ತಕ್ಕ ಪಾಠವಾಗಿದೆ ಎಂದು ಟಾಟೂ ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.