ಕುಶಾಲನಗರ, ಆ. 10: ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆ ಮತ್ತು ಮಾವುತರಿಗೆ ಅರಣ್ಯ ಇಲಾಖೆ 1 ಕೋಟಿ ರೂ ವಿಮೆ ಮಾಡಿಸಿದೆ. ಗಜಪಯಣದಿಂದ ದಸರಾ ಮುಗಿಸಿ ಕಾಡಿಗೆ ಹಿಂತಿರುಗುವ ತನಕ ಈ ವಿಮೆ ಜಾರಿಯಲ್ಲಿರುತ್ತದೆ ಎಂದು ಮೈಸೂರು ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾಹಿತಿ ನೀಡಿದ್ದಾರೆ.

ಈ ಸಾಲಿನ ದಸರಾದಲ್ಲಿ ಒಟ್ಟು 15 ಆನೆ, 30 ಮಾವುತರು ಹಾಗೂ ಕಾವಾಡಿಗರು ಪಾಲ್ಗೊಳ್ಳಲಿದ್ದು ಇವರಿಗೆ ಈ ಮೌಲ್ಯದ ವಿಮೆ ಮಾಡಿಸಲಾಗಿದೆ. ತಾ. 12 ರಂದು ಗಜಪಯಣದಿಂದ ಆರಂಭವಾಗಿ ಆನೆಗಳು ಅರಮನೆಗೆ ಆಗಮಿಸಿ ಜಂಬೂ ಸವಾರಿ ಮುಗಿಸಿ ಕಾಡಿಗೆ ಸೇರುವ ತನಕ ಈ ವಿಮೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ದುಬಾರೆ ಸಾಕಾನೆ ಶಿಬಿರದಿಂದ ಈ ಬಾರಿ 6 ಆನೆಗಳು ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಯುತ್ತಿದೆ.

ವಿರೋಧ: ದುಬಾರೆ ಸಾಕಾನೆ ಶಿಬಿರದಲ್ಲಿ ದಿನಗೂಲಿ ಮಾವುತರು, ಕಾವಾಡಿಗರಿಗೆ ಇಲಾಖೆ ವೇತನ ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವ ಹಿನೆÀ್ನಲೆಯಲ್ಲಿ ಶಿಬಿರದಿಂದ ಆನೆಯನ್ನು ಮೈಸೂರು ದಸರಾಗೆ ಕಳುಹಿಸಲು ವಿರೋಧ ವ್ಯಕ್ತಪಡಿಸುವದಾಗಿ ಸೋಮವಾರಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಪ್ರಮುಖ ಆರ್.ಕೆ. ಚಂದ್ರ ತಿಳಿಸಿದ್ದಾರೆ.

ಶಿಬಿರದ ಮಾವುತರು ಹಾಗೂ ಕಾವಾಡಿಗರ ಬಗ್ಗೆ ಇಲಾಖೆ ಸರಿಯಾಗಿ ಕಾಳಜಿ ವಹಿಸುತ್ತಿಲ್ಲ. ಕೇವಲ ದಸರಾ ಸಂದರ್ಭ ಮಾತ್ರ ಕೆಲವು ಸವಲತ್ತುಗಳನ್ನು ನೀಡಿ ನಂತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.