ಕುಶಾಲನಗರ, ಆ. 10: ಇಲ್ಲಿಗೆ ಸಮೀಪದ ಕಲ್ಲೂರು ಗ್ರಾಮದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು ರೈತರ ಬೆಳೆಗಳನ್ನು ತುಳಿದು ನಾಶಗೊಳಿಸಿದ ಘಟನೆ ನಡೆದಿದೆ. ಗ್ರಾಮದ ದಯಾನಂದ ಎಂಬ ರೈತನ ಜಮೀನಿಗೆ ಧಾಳಿ ನಡೆಸಿದ ಕಾಡಾನೆಗಳು ಸುವರ್ಣಗೆಡ್ಡೆ ಬೆಳೆಯನ್ನು ತುಳಿದು ನಾಶಪಡಿಸಿದೆ. ಇದರಿಂದಾಗಿ ಅಂದಾಜು ರೂ 50 ಸಾವಿರದಷ್ಟು ನಷ್ಟ ಉಂಟಾಗಿದೆ ಎಂದು ದಯಾನಂದ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮೀಪದ ತೋಟಗಳಲ್ಲಿ ಕಾಡಾನೆಗಳ ಹಿಂಡು ಹಾದುಹೋಗುವ ಸಂದರ್ಭ ಶುಂಠಿ ಬೆಳೆ, ಕಾಫಿ ಗಿಡಗಳು, ತೆಂಗಿನ ಮರಗಳು, ಸಪೋಟ ಮರಗಳನ್ನು ನೆಲಕ್ಕುರುಳಿಸಿ ಅಪಾರ ಹಾನಿ ಉಂಟು ಮಾಡಿರುವ ದೃಶ್ಯ ಗೋಚರಿಸಿದೆ.

ಕಲ್ಲೂರು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಾವಳಿ ಮಿತಿಮೀರಿದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ರಸ್ತೆಯಲ್ಲಿ ತಿರುಗಾಡಲು ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ. ತಕ್ಷಣ ನಷ್ಟವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಈ ಭಾಗದ ರೈತರಾದ ಎಸ್.ಪಿ.ಚಂದ್ರಪ್ಪ, ದಿನೇಶ್ ಮತ್ತಿತರರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.