ಒಡೆಯನಪುರ, ಆ. 10: ನಿಡ್ತ ಗ್ರಾ.ಪಂ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷ ಕೆ.ಎಂ.ಮುಸ್ತಾಪ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನಿಡ್ತ ಗ್ರಾ.ಪಂ.ವ್ಯಾಪ್ತಿಯ ಹಿತ್ಲುಕೇರಿ, ಹಾರೆಹೊಸೂರು, ಮಾದೆಗೋಡು, ರಾಮನಹಳ್ಳಿ, ಎಳನೀರುಗುಂಡಿ ಮುಂತಾದ ಕಡೆಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ, ಕಾಡಾನೆಗಳು ಗ್ರಾಮಗಳಿಗೆ ನುಗ್ಗಿ ರೈತರ ಕೃಷಿ ಬೆಳೆಗಳನ್ನು ನಾಶ ಪಡಿಸುತ್ತಿವೆ, ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ, ಹಾಗೂ ಕಾಡಾನೆಗಳು ರೈತರ ಕೃಷಿ ಫಸಲನ್ನು ನಷ್ಟಪಡಿಸಿರುವುದಕ್ಕೆ ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ನೀಡಿರುತ್ತಾರೆ. ವರ್ಷಗಳು ಕಳೆದರೂ ಇನ್ನೂ ಸಹ ರೈತರಿಗೆ ಪರಿಹಾರ ಬಂದಿಲ್ಲ ಎಂದು ನಿಡ್ತ ಗ್ರಾಮದ ಸುರೇಶ್, ಸುಬ್ಬಪ್ಪ ಸಭೆಯಲ್ಲಿ ಹಾಜರಿದ್ದ ಅರಣ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವನಪಾಲಕ ತನುಜ - ಕಾಡಾನೆಗಳನ್ನು ಕಾಡಿಗೆ ಅಟ್ಟುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಅನೇಕ ಭಾರಿ ಕಾರ್ಯಾಚರಣೆ ನಡೆಸಲಾಗಿದೆ, ಫಸಲು ನಷ್ಟ ಕೋರಿ ರೈತರು ಸಲ್ಲಿಸಿರುವ ಅರ್ಜಿಗೆ ಅನುಸಾರವಾಗಿ ಹಂತಹಂತವಾಗಿ ಪರಿಹಾರ ನೀಡಲಾಗುವದೆಂದರು.

ವಿದ್ಯುತ್ ಸಮಸ್ಯೆ : ಇತ್ತೀಚೆಗೆ ಮಳೆಗಾಳಿಗೆ ಮುಳ್ಳೂರು, ಮಾದೇಗೋಡು, ಗೋಪಾಲಪುರ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದು ಹೋಗಿದ್ದರೂ ಸಹ ವಿದ್ಯುತ್ ಇಲಾಖೆ ವಿದ್ಯುತ್ ಮಾರ್ಗವನ್ನು ದುರಸ್ಥಿ ಪಡಿಸಿಲ್ಲ ಎಂದು ಗ್ರಾಮಸ್ಥರು ವಿದ್ಯುತ್ ಇಲಾಖೆ ಸಿಬ್ಬಂದಿಯೊಂದಿಗೆ ದೂರಿಕೊಂಡರು. ಇದಕ್ಕೆ ಉತ್ತರಿಸಿದ ಶನಿವಾರಸಂತೆ ಸೆಸ್ಕ್ ಶಾಖೆಯ ಹಿರಿಯ ಸಿಬ್ಬಂದಿ ಹಿರೇಮಠ್- ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದ್ದು ಬಿದ್ದಿರುವ ಹಿನ್ನಲೆಯಲ್ಲಿ ಇದೀಗ ವಿದ್ಯುತ್ ಮಾರ್ಗದ ಕಾಮಗಾರಿ ನಡೆಯುತ್ತಿದೆ ಎಂದರು.

ಕುಡಿಯುವ ನೀರು : ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ - ಚರಂಡಿ ದುರಸ್ಥಿ ಮುಂತಾದ ಸಮಸ್ಯೆಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಜಿ. ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ಜಿ.ಪಂ. ಅನುದಾನದಿಂದ ಹಂತಹಂತವಾಗಿ ರಸ್ತೆ ದುರಸ್ಥಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಆದ್ಯತೆ ಪ್ರಕಾರವಾಗಿ ವಿನಿಯೋಗಿಸಲಾಗುವದು, ನಿಡ್ತ ಗ್ರಾ.ಪಂ. ವ್ಯಾಪ್ತಿಯ ಮುಳ್ಳೂರು ಗ್ರಾಮದ ರಸ್ತೆ, ಹಾರೆಹೊಸೂರು ಗ್ರಾಮದ ರಸ್ತೆ ಮರು ಡಾಂಬರೀಕರಣಕ್ಕಾಗಿ ತಲಾ 2.30 ಲಕ್ಷ ರೂ. ನಂತೆ ಮಂಜೂರಾತಿಯಾಗಿದೆ, ಸಧ್ಯದಲ್ಲೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದ್ದು, ಗೋಪಾಲಪುರ ಬನಶಂಕರಿ ದೇವಾಲಯದ ರಸ್ತೆ ದುರಸ್ತಿ ಕಾಮಗಾರಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಡೆಂಘಿ, ಮಲೇರಿಯಾ ಕಾಯಿಲೆ ಕುರಿತು ಮಾಹಿತಿ ನೀಡಿದ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಶಿವಪ್ರಕಾಶ್-ಡೆಂಘಿ, ಮಲೇರಿಯಾ ಸಾಂಕ್ರಾಮಿಕ ಕಾಯಿಲೆಗಳಾಗಿದ್ದು ಈ ನಿಟ್ಟಿನಲ್ಲಿ ಗ್ರಾಮಸ್ಥರು ಜಾಗೃತಿಗೊಳ್ಳಬೇಕು, ಮಳೆಗಾಲದಲ್ಲಿ ಹೆಚ್ಚಾಗಿ ಕಾಯಿಲೆಗಳು ಬಹುಬೇಗ ಹರಡುತ್ತದೆ. ಗ್ರಾಮದ ಪ್ರತಿ ಮನೆಯ ಪರಿಸರವನ್ನು ಶುಚಿತ್ವದಿಂದ ಕಾಪಾಡಿಕೊಳ್ಳಬೇಕು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು, ಜ್ವರದ ಲಕ್ಷಣಗಳು ಕಂಡು ಬಂದಾಗ ಮೊದಲು ಹತ್ತಿರದ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ವೈದÀ್ಯರ ಸಲಹೆಯನ್ನು ಪಾಲಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಹೊಂದಿದರೆ ಮಾತ್ರ ಡೆಂಘಿ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ ಇದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್ ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳು, ಪಿಡಿಒ ಹಾಜರಿದ್ದರು.

-ವಿ.ಸಿ.ಸುರೇಶ್ ಒಡೆಯನಪುರ