*ಗೋಣಿಕೊಪ್ಪಲು, ಆ. 10: ಪರಿಸರ ಜಾಗೃತಿಯಿಂದ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಗೋಣಿಕೊಪ್ಪ ವಾಹನ ಚಾಲಕರ ಸಂಘ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಸೈಕ್ಲೊತಾನ್ ಸ್ಪರ್ಧೆ ಏರ್ಪಡಿಸುವ ಮೂಲಕ ಪರಿಸರ ಕಾಳಜಿಗೆ ಮುಂದಾಗಿದ್ದು, ಜನರಲ್ಲಿ ಸೈಕಲ್ ಚಾಲನೆಯಿಂದ ಉಂಟಾಗುವ ಆರೋಗ್ಯ ವೃದ್ಧಿಯ ಬಗ್ಗೆ ಜಾಗೃತಿ ಸಾರಲು ಕಳೆದ ಮೂರು ವರ್ಷಗಳಿಂದ ಸೈಕ್ಲೋತಾನ್ ಸ್ಪರ್ಧೆ ಏರ್ಪಡಿಸುತ್ತಿದೆ. ವಾಯುಮಾಲಿನ್ಯ ತಡೆಗಟ್ಟುವ ಬಗ್ಗೆ ವಿಶೇಷ ಅಭಿಯಾನಕ್ಕೆ ಮುಂದಾಗಿ ರಾಜ್ಯ ಮಟ್ಟದ ಸೈಕಲ್ ಸ್ಪರ್ಧೆ ನಡೆಸುತ್ತಿದ್ದು, ಪಟ್ಟಣದಲ್ಲಿನ ವಾಯು ಮಾಲಿನ್ಯ ತಡೆಗಟ್ಟಲು ಜಾಗೃತಿ ಅಭಿಯಾನಕ್ಕೆ ಸಂಘ ಮುಂದಾಗಿದೆ.
ಜತೆಗೆ ಹಲವು ವರ್ಷಗಳಿಂದ ಸಂಘದ ನೂರಕ್ಕೂ ಹೆಚ್ಚು ಸದಸ್ಯರುಗಳು ಒಗ್ಗಟ್ಟಿನ ಪ್ರತೀಕವಾಗಿ ರಕ್ತದಾನ ಶಿಬಿರ, ಶ್ರಮದಾನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ಬಾರಿ ಆಂಬ್ಯುಲೆನ್ಸ್ ಸೇವೆಯನ್ನು ಸಹ ಸಂಘದ ವತಿಯಿಂದ ಪ್ರಾರಂಭಿಸ ಲಾಗಿದ್ದು, ಬಡವರಿಗೆ ಇದರಿಂದ ಹೆಚ್ಚಿನ ಪ್ರಯೋಜನ ದೊರಕುತ್ತಿದೆ. ಸಿ.ಕೆ. ಬೋಪಣ್ಣ ಅಧ್ಯಕ್ಷತೆಯಲ್ಲಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಈ ಬಾರಿಯ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಉದ್ಯಾನವನ್ನು ಅಭಿವೃದ್ಧಿಪಡಿಸುವ ಚಿಂತನೆ ಹರಿಸಲಾಗಿದೆ. ವಾಹನಗಳ ದಟ್ಟಣೆಯಿಂದ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ವಾಯುಮಾಲಿನ್ಯ ಗಳನ್ನು ತಡೆಗಟ್ಟಲು ಸೈಕಲ್ ಸವಾರಿ ಉತ್ತಮ ಮಾರ್ಗ ಎಂದು ಕಂಡುಕೊಂಡ ವಾಹನ ಚಾಲಕರು ಈ ಬಗ್ಗೆ ಅಭಿಯಾನ ಸಾರುವ ಸಲುವಾಗಿಯೇ ಆಗಸ್ಟ್ 15ರಂದು ಸೈಕಲ್ ಸ್ಪರ್ಧೆ ಏರ್ಪಡಿಸುತ್ತಿದೆ.
ಸೈಕಲ್ ಸ್ಪರ್ಧೆ: 71ನೇ ವರ್ಷದ ಸ್ವಾತಂತ್ರೋತ್ಸವ ಅಂಗವಾಗಿ ಆಗಸ್ಟ್ 15ರಂದು ವಾಹನ ಚಾಲಕರ ಸಂಘದ ಕಚೇರಿಯ ಮುಂಭಾಗದಿಂದ ಸೈಕಲ್ ಸ್ಪರ್ಧೆ ನಡೆಯಲಿದೆ ಎಂದು ಸಿ.ಕೆ. ಬೋಪಣ್ಣ ಮಾಹಿತಿ ನೀಡಿದ್ದಾರೆ.
ಸ್ಪರ್ಧೆಯ್ಲಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಉಪಾಧ್ಯಕ್ಷ ಪಿ.ಎಸ್. ಶರತ್ ಕಾಂತ್ 9901060053, ಕಾರ್ಯದರ್ಶಿ ಜಿ.ಆರ್. ಕೃಷ್ಣೇಗೌಡ 9449476425 ಇವರುಗಳನ್ನು ಸಂಪರ್ಕಿಸ ಬಹುದಾಗಿದೆ.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎಸ್. ಶರತ್ ಕಾಂತ್, ಕಾರ್ಯದರ್ಶಿ ಜಿ.ಆರ್. ಕೃಷ್ಣೇಗೌಡ, ಸಹಕಾರ್ಯದರ್ಶಿ ರೇಣು ಕುಮಾರ್, ಖಜಾಂಚಿ ರಶೀದ್ ಉಪಸ್ಥಿತರಿದ್ದರು.