ಸೋಮವಾರಪೇಟೆ, ಆ. 10: ಮೂಲತಃ ಅಮೇರಿಕಾದ ಕ್ರೀಡೆಯಾಗಿದ್ದು, ಭಾರತದಲ್ಲಿ ಅಪರಿಚಿತವಾಗಿಯೇ ಉಳಿದಿರುವ ಬೇಸ್‍ಬಾಲ್ ಕ್ರೀಡೆಯಲ್ಲಿ ಭಾರತ ತಂಡವನ್ನು ಕೊಡಗಿನ ಕುವರಿ ಪ್ರತಿನಿಧಿಸುತ್ತಿದ್ದಾಳೆ. ಸಾಮಾನ್ಯವಾಗಿ ಕ್ರಿಕೆಟ್ ಆಟವನ್ನೇ ಹೋಲುವಂತಹ ಬೇಸ್‍ಬಾಲ್ ಕ್ರೀಡೆಯ ಬಗ್ಗೆ ಅರಿವು ಹೊಂದಿರುವವರು ವಿರಳವಾಗಿದ್ದು, ಕೊಡಗಿನ ಮಟ್ಟಿಗಂತೂ ಈ ಕ್ರೀಡೆ ಅಪರಿಚಿತವೇ ಸರಿ.

ಇಂತಹ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಹಂತಹಂತವಾಗಿ ತರಬೇತಿ ಪಡೆದಿರುವ ಕೊಡಗಿನ ಯುವತಿಯೋರ್ವಳು ಇದೀಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಹಾಂಗ್‍ಕಾಂಗ್‍ನಲ್ಲಿ ನಡೆಯಲಿರುವ ಏಷ್ಯಾ ಕಪ್ ಬೇಸ್‍ಬಾಲ್ ಟೂರ್ನಮೆಂಟ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮೂಲತಃ ಮೂರ್ನಾಡು-ಬಾಡಗ ನಿವಾಸಿಯಾಗಿದ್ದು, ಸದ್ಯ ಸೋಮವಾರಪೇಟೆ ಸಮೀಪದ ಯಡವಾರೆಯ ತಂಗವಳ್ಳಿ ಎಸ್ಟೇಟ್‍ನಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿರುವ ಯು.ಬಿ. ಸುರೇಶ್ ಮತ್ತು ಯು.ಎಸ್. ಇಂದಿರಾ ದಂಪತಿ ಪುತ್ರಿ, ಯು.ಎಸ್. ಭವ್ಯ ಅವರು ಅಪರಿಚಿತ ಕ್ರೀಡೆಯಲ್ಲಿ ಸಾಧನೆ ತೋರಿರುವ ಕ್ರೀಡಾಪಟು.

ವೀರಾಜಪೇಟೆಯ ಸೆಂಟ್ ಆನ್ಸ್‍ನಲ್ಲಿ ಪ್ರೌಢಶಾಲೆ ಶಿಕ್ಷಣ, ಕಾವೇರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ ಭವ್ಯ ನಂತರ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿದ್ದಾರೆ.

ಕಳೆದ 2016ರಲ್ಲಿ ಬೆಂಗಳೂರಿನ ಸಾಯಿ ಕ್ರೀಡಾ ಶಾಲೆಯಲ್ಲಿ ನಡೆದ ಬೇಸ್‍ಬಾಲ್ ವಲ್ರ್ಡ್‍ಕಪ್ ಕ್ಯಾಂಪ್‍ನಲ್ಲಿ ಭಾಗವಹಿಸಿ ಉತ್ತೀರ್ಣರಾದರೂ ವಿದೇಶಕ್ಕೆ ತೆರಳಲು ಅಸಾಧ್ಯವಾಗಿತ್ತು. ನಂತರ ಒಂದು ವರ್ಷಗಳ ಕಾಲ ಕಠಿಣ ಅಭ್ಯಾಸ ಮಾಡಿದ ಫಲವಾಗಿ ಈ ಬಾರಿಯೂ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಬೇಸ್‍ಬಾಲ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಸೆಪ್ಟೆಂಬರ್ 2 ರಿಂದ 7ರವರೆಗೆ ಹಾಂಗ್‍ಕಾಂಗ್‍ನಲ್ಲಿ ನಡೆಯುವ ಏಷ್ಯಾ ಕಪ್ ಬೇಸ್‍ಬಾಲ್ ಟೂರ್ನಮೆಂಟ್‍ನಲ್ಲಿ ಭಾಗವಹಿಸುತ್ತಿರುವ, ಭವ್ಯ ಪ್ರತಿನಿಧಿಸುತ್ತಿರುವ ಭಾರತ ತಂಡದೊಂದಿಗೆ ಜಪಾನ್, ಹಾಂಗ್‍ಕಾಂಗ್, ಪಾಕಿಸ್ತಾನ, ನೆದರ್‍ಲ್ಯಾಂಡ್, ನೇಪಾಳ ತಂಡಗಳು ಭಾಗವಹಿಸಲಿವೆ. ಭವ್ಯ ಅವರಿಗೆ ಬೆಂಗಳೂರಿನಲ್ಲಿ ಸಾಯಿ ಕ್ರೀಡಾ ತರಬೇತಿ ಶಾಲೆಯ ಹಿರಿಯ ತರಬೇತುದಾರ ಗೋಪಿನಾಥ್ ಅವರು ತರಬೇತಿ ನೀಡಿದ್ದಾರೆ.

ಹಲವಷ್ಟು ಮಂದಿಗೆ ತಿಳಿದೇ ಇಲ್ಲದ ಕ್ರೀಡೆಯಲ್ಲಿ ತಾನು ಆಸಕ್ತಿ ವಹಿಸಿ ಕಠಿಣ ಪರಿಶ್ರಮ, ತರಬೇತುದಾರರ ಉತ್ತಮ ತರಬೇತಿ, ಪೋಷಕರ ಪ್ರೋತ್ಸಾಹದಿಂದ ಭಾರತ ತಂಡಕ್ಕೆ ಆಯ್ಕೆಯಾಗಿರುವದು ಸಂತಸ ತಂದಿದ್ದು, ಉತ್ತಮ ಪ್ರದರ್ಶನ ನೀಡುವ ಆಶಯ ಹೊಂದಿದ್ದೇನೆ ಎಂದು ‘ಶಕ್ತಿ’ಯೊಂದಿಗೆ ಭವ್ಯ ಸಂತಸ ಹಂಚಿಕೊಂಡಿದ್ದಾರೆ. 2020ರಲ್ಲಿ ನಡೆಯುವ ಒಲಂಪಿಕ್ಸ್‍ಗೂ ನೂತನವಾಗಿ ಬೇಸ್‍ಬಾಲ್ ಸೇರ್ಪಡೆಗೊಂಡಿದೆ. ಹಾಂಗ್‍ಕಾಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಒಲಂಪಿಕ್ಸ್‍ನಲ್ಲೂ ಈಕೆ ಭಾರತವನ್ನು ಪ್ರತಿನಿಧಿಸಲಿ ಎಂದು ಹಾರೈಸೋಣ ಅಲ್ಲವೇ?

- ವಿಜಯ್ ಹಾನಗಲ್