ಮಡಿಕೇರಿ, ಆ. 10: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಿರಿಯ ಬಾಲಕ - ಬಾಲಕಿಯರ ವಸತಿ ನಿಲಯದ ಸಮಸ್ಯೆಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಸಂಬಂಧಿಸಿದ ಉಪನಿರ್ದೇಶಕಿ ಜಯಲಕ್ಷ್ಮೀ ಬಾಯಿ ಅವರಿಗೆ ಸೂಚಿಸಿದ್ದಾರೆ.

ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಹೊಟೇಲ್‍ನಿಂದ ಊಟ ನೀಡುವ ಆರೋಪ ಸಂಬಂಧ ನಿನ್ನೆ ಸಂಜೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಕುರಿತು ಇಂದು ‘ಶಕ್ತಿ’ ವರದಿ ಬೆನ್ನಲ್ಲೇ ಶಶಿ ಸುಬ್ರಮಣಿ ಹಠಾತ್ ಧಾವಿಸಿ ಕುಂದು ಕೊರತೆ ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳ ಪೋಷಕರು ಕೂಡ ವಸತಿ ನಿಲಯಕ್ಕೆ ಧಾವಿಸುವದರೊಂದಿಗೆ, ಸ್ಥಾಯಿ ಸಮಿತಿ ಅಧ್ಯಕ್ಷರೊಡನೆ ಹಾಗೂ ಉಪನಿರ್ದೇಶಕಿ ಜಯಲಕ್ಷ್ಮಿ ಬಾಯಿ ಬಳಿ ಮಕ್ಕಳ ಸಮಸ್ಯೆ ಬಗ್ಗೆ ಸಮಾಲೋಚಿಸಿದರು.

ಉಪನಿರ್ದೇಶಕರ ಹೇಳಿಕೆ : ಈ ವೇಳೆ ಆಹಾರ ನೀಡಿಕೆ ಕುರಿತು ಸ್ಪಷ್ಟೀಕರಣ ನೀಡಿದ ಜಯಲಕ್ಷ್ಮೀಬಾಯಿ ಈ ಹಿಂದೆ ಕೆಲವು ಸಮಯ ಹೊಟೇಲ್ ಊಟ ನೀಡಿದ್ದು, ಪ್ರಸಕ್ತ ಇಲ್ಲಿಯೇ ಅಡುಗೆ ತಯಾರಿಸಿ ನೀಡಲಾಗುತ್ತಿದೆ ಎಂದರಲ್ಲದೆ, ನಿನ್ನೆ ಮೊಟ್ಟೆ ಹಾಗೂ ಮೀನು ಸಿಗದ ಕಾರಣ ರಾತ್ರಿ ಊಟಕ್ಕೆ ಮಕ್ಕಳಿಗೆ ಕೋಳಿ ಮಾಂಸ ನೀಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಸರಕಾರದ ವೇಳಾಪಟ್ಟಿಯಂತೆ ಉತ್ತಮ ಆಹಾರವನ್ನು ಗುಣಮಟ್ಟದೊಂದಿಗೆ ಮಕ್ಕಳಿಗೆ ನೀಡುವಂತೆ ಶಶಿ ಸುಬ್ರಮಣಿ ತಿಳಿಹೇಳಿದರಲ್ಲದೆ, ಹೆಣ್ಣು ಮಕ್ಕಳ ಸಹಿತ ವಿದ್ಯಾರ್ಥಿಗಳ ಸುರಕ್ಷತೆಗೆ ನಿಗಾ ವಹಿಸುವಂತೆ ಆದೇಶಿಸಿದರು.