ಸಿದ್ದಾಪುರ, ಆ. 10: ಬೀಟಿ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಈರ್ವರನ್ನು ಬಂಧಿಸಿ ಲಾರಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶ್ವಸಿಯಾಗಿದ್ದಾರೆ. ಸಿದ್ದಾಪುರ ಸಮೀಪದ ಆನಂದಪುರದ ಮೂಲಕ ಲಾರಿ (ಕೆ.ಎಲ್. 25. ಜಿ. 4645)ಯಲ್ಲಿ ಅಂದಾಜು 6 ಲಕ್ಷ ರೂಪಾಯಿ ಮೌಲ್ಯದ ಬೀಟಿ ಮರದ ನಾಟಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖಾ ಧಿಕಾರಿಗಳು ಹಾಗೂ ರ್ಯಾಪಿಡ್ ರೆಸ್ಪಾನ್ಸ್ ತಂಡ ಧಾಳಿ ನಡೆಸಿ ರೂ. 15 ಲಕ್ಷ ಮೌಲ್ಯದ ಲಾರಿ ಹಾಗೂ ಬೀಟಿ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ಮಧ್ಯರಾತ್ರಿ ಲಾರಿಯು ಅಮ್ಮತ್ತಿ ಮೂಲಕ ಮೈಸೂರಿಗೆ ತೆರಳುತ್ತಿರುವ ಸಂದರ್ಭ ಆರ್.ಆರ್.ಟಿ. ತಂಡವು ಒಂದು ಮಾರುತಿ ವ್ಯಾನ್ ಹಾಗೂ ನಾಟಗಳು ತುಂಬಿದ ಲಾರಿ ತೆರಳುತ್ತಿದ್ದುದ್ದನ್ನು ಗಮನಿಸಿದ್ದಾರೆ. ಈ ಸಂದರ್ಭ ಧಾಳಿ ನಡೆಸಿ ಲಾರಿಯಲ್ಲಿದ್ದ ಗೋಣಿಕೊಪ್ಪಲು ನಿವಾಸಿಗಳಾದ ಚರಣ್‍ರಾಜ್ ಹಾಗೂ ರಾಜೇಂದ್ರ ಎಂಬವರನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳಾದ ಸಿದ್ದಾಪುರದ ಕಲೀಲ್, ಆನಂದಪುರ ನಿವಾಸಿ ದೀಪಕ್ ವ್ಯಾನ್‍ನೊಂದಿಗೆ ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಡಿ.ಸಿ.ಎಫ್. ಕ್ರಿಸ್ಟಿರಾಜ್, ಎ.ಸಿ.ಎಫ್. ರೋಹಿಣಿ, ಆರ್.ಎಫ್.ಓ. ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಗಣೇಶ್ ಕುಮಾರ್, ರಮೇಶ್, ಕುಮಾರ್, ಆರ್.ಆರ್.ಟಿ. ತಂಡದ ಸಿಬ್ಬಂದಿಗಳಾದ ದಿನೇಶ್, ಮೋಹನ್, ಸಂತೋಷ್, ಆರ್ದಶ್, ಶಶಿ, ದೀನು, ಚಾಲಕ ಹರೀಶ್ ಪಾಲ್ಗೊಂಡಿದ್ದರು.
ವರದಿ: ವಾಸು