ಮಡಿಕೇರಿ, ಆ. 10: ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಂಸದರುಗಳಾದ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಮಾಜಿ ವಿಧಾನಸಭಾಧ್ಯಕ್ಷ ಮತ್ತು ಶಾಸಕ ಕೆ.ಜಿ.ಬೋಪಯ್ಯ ಅವರನ್ನೊಳಗೊಂಡ ನಿಯೋಗ ಇಂದು ಕೇಂದ್ರ ಪರಿಸರ ಖಾತೆ ಸಚಿವ ಡಾ. ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಸಂಬಂಧ ಜನರಲ್ಲಿ ಉಂಟಾಗಿರುವ ಆತಂಕ ನಿವಾರಣೆಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಈ ವೇಳೆ ನಿಯೋಗಕ್ಕೆ ಭರವಸೆ ನೀಡಿರುವ ಕೇಂದ್ರ ಸಚಿವರು ಕಸ್ತೂರಿ ರಂಗನ್ ವರದಿ ಹಾಗೂ ಸೂಕ್ಷ್ಮ ಪರಿಸರ ವಲಯ ಸಂಬಂಧ ತಜ್ಞರೊಂದಿಗೆ ಸಮಾಲೋಚಿಸುವ ಭರವಸೆ ನೀಡಿದ್ದು, ವರದಿ ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ಕೇಂದ್ರ ಸೂಕ್ತ ತೀರ್ಮಾನ ಕೈಗೊಳ್ಳುವದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.