ಸೋಮವಾರಪೇಟೆ, ಆ. 10: ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಭಾರತಕ್ಕೆ ಕಂಟಕಪ್ರಾಯವಾಗಿರುವ ಪಾಕಿಸ್ತಾನಕ್ಕೆ ಪರಮಾಪ್ತ ದೇಶವಾದ ಚೀನಾ ಇದೀಗ ಭಾರತದ ಮೇಲೆ ಕತ್ತಿ ಮಸೆಯುತ್ತಿದೆ. ದೇಶವಾಸಿಗಳು ಚೀನಾ ವಸ್ತುಗಳನ್ನು ಖರೀದಿಸುವ ಮುನ್ನ ಗಡಿಯಲ್ಲಿರುವ ಭಾರತೀಯ ಸೈನಿಕರನ್ನು ನೆನೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕೃಷ್ಣ ಉಪಾಧ್ಯಾಯ ಕರೆ ನೀಡಿದರು.

ಇಲ್ಲಿನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಚೀನಾ ದೇಶವು ಭಾರತದ ಮೇಲೆ ಯುದ್ಧ ತಯಾರಿ ನಡೆಸುತ್ತಿದೆ. ಚೀನಾದ ಆರ್ಥಿಕತೆ ನಿಂತಿರುವದೇ ವ್ಯಾಪಾರೋದ್ಯಮದಿಂದ. ಅಲ್ಲಿನ ವ್ಯಾಪಾರೋದ್ಯಮಕ್ಕೆ ಭಾರತ ಬಹುದೊಡ್ಡ ಮಾರುಕಟ್ಟೆ ಒದಗಿಸಿದ್ದು, ನಮ್ಮಲ್ಲಿನ ಹಣ ಪಡೆದು ನಮ್ಮ ದೇಶದ ವಿರುದ್ಧವೇ ಯುದ್ಧ ಮಾಡಲು ಹವಣಿಸುತ್ತಿರುವ ಚೀನಾಕ್ಕೆ ಭಾರತೀಯರೆಲ್ಲರೂ ಪಾಠ ಕಲಿಸಬೇಕಿದೆ. ಚೀನಾ ವಸ್ತುಗಳನ್ನು ತಿರಸ್ಕರಿಸುವ ಸಂಕಲ್ಪವನ್ನು ಪ್ರತಿಯೋರ್ವರೂ ಮಾಡಬೇಕಿದೆ ಎಂದರು.

ಇದೀಗ ಭಾರತ ಬಲವಾಗುತ್ತಿದ್ದು, ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬರುತ್ತಿದೆ. ಸಿಂಧೂನದಿ ನೀರಿನಿಂದ ಅಯೋಧ್ಯೆಯಲ್ಲಿ ರಾಮನಿಗೆ ಕುಂಭಾಭಿಷೇಕ ನಡೆಯುವ ದಿನಗಳು ಸಮೀಪಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಆರ್‍ಪಿಎಫ್‍ನ ನಿವೃತ್ತ ಯೋಧ ಸಿ.ಕೆ. ರಾಜು ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ್ ಅಜಿತ್, ಉಪಾಧ್ಯಕ್ಷ ಸುಜು ಸುಬ್ಬಯ್ಯ, ತಾಲೂಕು ಅಧ್ಯಕ್ಷ ಜಿ.ಕೆ. ರಮೇಶ್, ಕುಶಾಲನಗರದ ಅಧ್ಯಕ್ಷ ಮಧು ಅವರುಗಳು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಜೋಯಪ್ಪ, ಹಿಂದೂಪರ ಸಂಘಟನೆಗಳ ಮುಖಂಡರುಗಳಾದ ಕರ್ಕಳ್ಳಿ ರವಿ, ಸುಭಾಷ್ ತಿಮ್ಮಯ್ಯ, ಉಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.