ಮಡಿಕೇರಿ, ಆ. 10: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರ ಸಭೆಯ ಆಡಳಿತ ವ್ಯವಸ್ಥೆ ಸೂತ್ರವಿಲ್ಲದ ಗಾಳಿಪಟದಂತೆ ಆಗಿರುವ ಆರೋಪದೊಂದಿಗೆ ಅಧ್ಯಕ್ಷ-ಉಪಾಧ್ಯಕ್ಷರು, ಆಯುಕ್ತರು, ಸದಸ್ಯರುಗಳ ನಡುವೆ ಹೊಂದಾಣಿಕೆಯ ಕೊರತೆ ಗೋಚರಿಸತೊಡಗಿದೆ.ನಗರಸಭೆಯ ಅಧೀನದಲ್ಲಿರುವ ಮೂರು ಶಾಲೆಗಳ ತಾತ್ಕಾಲಿಕ ಶಿಕ್ಷಕರಿಗೆ ಕನಿಷ್ಟ ಸಂಭಾವನೆ ನೀಡದೆ 11 ತಿಂಗಳು ಕಳೆದು ಹೋದರೆ, ನಗರಸಭೆಯ ಕಚೇರಿಗಳಲ್ಲಿನ ವಿವಿಧ ವಿಭಾಗಗಳ ಗುತ್ತಿಗೆ ಸಿಬ್ಬಂದಿಗೆ ಆರೆಂಟು ತಿಂಗಳಿನಿಂದ ವೇತನ ನೀಡದಿರುವದು ಬಹಿರಂಗ ಗೊಂಡಿದೆ.ಇನ್ನೊಂದೆಡೆ ಮಡಿಕೇರಿ ನಗರದಲ್ಲಿ ಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿಗಳಿಗೂ ನಾಲ್ಕೈದು ತಿಂಗಳಿನಿಂದ ಹಣ ಪಾವತಿಸದಿರುವ ಕಾರಣ, ಹಾದಿ ಬೀದಿಯೆಲ್ಲ ಅಲ್ಲಲ್ಲಿ ಕಸ ಉಳಿದು ಕೊಳ್ಳುವಂತಾಗಿದೆ.

ಕೆಲಸವೂ ಆಗುತ್ತಿಲ್ಲ

ಇನ್ನು ವಿವಿಧ ಕೆಲಸಗಳ ಸಲುವಾಗಿ ನಗರಸಭೆಯ ಕಚೇರಿಗೆ ಬರುವ ಸಾರ್ವಜನಿಕರು ಯಾವ ಕೆಲಸವೂ ಆಗದೆ, ಹಿಡಿಶಾಪ ಹಾಕುತ್ತಾ ಬರಿಗೈನಲ್ಲಿ ಹಿಂತೆರಳುತ್ತಿರುವ ಪ್ರಸಂಗಗಳನ್ನು ನಿತ್ಯ ಕಾಣುವಂತಾಗಿದೆ.

ಹಲವು ಕಾರಣಗಳು

ಇಂತಹ ಪರಿಸ್ಥಿತಿಗಳ ಕುರಿತು ನಗರಸಭೆಯಲ್ಲಿ ನಿರ್ದಿಷ್ಟವಾಗಿ ಯಾರೂ ಹೊಣೆಗಾರಿಕೆ ನಿಭಾಯಿಸು ವವರು ಇಲ್ಲಿ ಇರುವಂತೆ ಕಾಣುವದಿಲ್ಲ. ಬದಲಾಗಿ ಒಬ್ಬರಿ ಗೊಬ್ಬರ ಮೇಲೆ ಅಸಮಾಧಾನದ ಮಾತುಗಳು ಇಲ್ಲಿ ಕೇಳಿ ಬರತೊಡಗಿದ್ದು, ಒಂದು ರೀತಿ ಸಾರ್ವಜನಿಕ ವಲಯದಲ್ಲಿ ಕೊಡಗು ಜಿಲ್ಲಾ ಕೇಂದ್ರದಲ್ಲಿರುವ ಸ್ಥಳೀಯ ಆಡಳಿತ ಗೊಂದಲದ ಗೂಡಾಗಿರುವ ಅನುಭವವಾಗತೊಡಗಿದೆ.

ಅಧ್ಯಕ್ಷರು ಹೇಳುವದೇನು?

ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಅವರು, ಈ ಹಿಂದೆ 2001 ರಿಂದ 2004ರ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅನುಭವವಿ ದ್ದರೂ, ಪ್ರಸಕ್ತ ಹೆಚ್ಚಿನವರ ಅಸಹಕಾರದಿಂದ ಒಂದು ರೀತಿ ಅಸಹಾಯಕರಾಗಿ ಮೌನಕ್ಕೆ ಶರಣಾದಂತಿದೆ. ಅವರು ತಾ. 15.9.2016 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಮುಂದಿನ ತಿಂಗಳ 15ಕ್ಕೆ ಒಂದು ವರ್ಷ ಪೂರೈಸುತ್ತಿದ್ದರೂ ಕೂಡ ಏನೂ ಮಾಡಲಾರದ ಸನ್ನಿವೇಶದಿಲ್ಲಿರುವಂತಿದೆ. ‘ನಾನು ಏನೂ ಪ್ರತಿಕ್ರಿಯೆ ಕೊಡಲಾರೆ’ ಮುಂದೆ ತಿಳಿಸುವೆ ಎಂದಷ್ಟೇ ‘ಶಕ್ತಿ’iÉೂಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಪಾಧ್ಯಕ್ಷರ ಹೇಳಿಕೆ

ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಮುಂದಿಡುತ್ತಿದ್ದರೂ, ಪರಿಹರಿಸಲು ಸಾಧ್ಯವಾಗುತ್ತಿಲ್ಲವೇಕೆ? ಎಂಬದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರನ್ನು ಪ್ರಶ್ನಿಸಿದಾಗ, ಸರಕಾರ ಮತ್ತು ಆಡಳಿತ ಮಂಡಳಿ ಅಧ್ಯಕ್ಷರು ಕಾಂಗ್ರೆಸ್ಸಿಗರದ್ದಾಗಿದ್ದು, ತಾವೇನೂ ಮಾಡಲು ಆಗುತ್ತಿಲ್ಲ ವೆಂದು ಅಸಮಾಧಾನ ಹೊರಗೆಡ ವಿದ್ದಾರೆ. ಅಧ್ಯಕ್ಷರು ಎಲ್ಲರನ್ನೂ ಸಭೆ ಕರೆದು ಚರ್ಚಿಸಿ ಮುಕ್ತ ತೀರ್ಮಾನಕ್ಕೆ ಮುಂದಾಗುತ್ತಿಲ್ಲವೆಂದು ಅಭಿಪ್ರಾಯ ಹೊರಗೆಡವಿದ್ದಾರೆ.

ಅಸಮಾಧಾನದ ಹೊಗೆ

ಈಗಿನ ಪರಿಸ್ಥಿತಿಯಲ್ಲಿ ನಗರಸಭೆಯ ಕಚೇರಿ ಸಿಬ್ಬಂದಿ ಸಹಿತ ಸ್ವಚ್ಛತಾ ನೌಕರರು, ಶಾಲಾ ಶಿಕ್ಷಕರುಗಳಿಗೆ ವೇತನ ನೀಡದೆ ಎದುರಾಗಿರುವ ಎಲ್ಲ ಗೊಂದಲಗಳಿಗೆ ಪೌರಾಯುಕ್ತೆ ಶುಭ ಕಾರಣರೆಂದು ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಜನರ ಸಮಸ್ಯೆ ಸರಿಪಡಿಸಲು ಸಮಾಲೋಚನೆಗಾಗಿ ಅಧ್ಯಕ್ಷರು ಹಾಗೂ ಆಡಳಿತ ಸದಸ್ಯರು ಆಯುಕ್ತೆ ಶುಭ ಅವರನ್ನು ಅಧ್ಯಕ್ಷರು ಕೊಠಡಿಗೆ

(ಮೊದಲ ಪುಟದಿಂದ) ಆಹ್ವಾನಿಸಿದರೂ ಬಂದಿಲ್ಲವೆಂದು ಟೀಕಿಸಿದ್ದಾರೆ. ಇನ್ನೊಂದೆಡೆ ಬಡ ಕಾರ್ಮಿಕರಿಗೆ ಅವರು ದುಡಿದ ಸಂಬಳ ನೀಡದೆ ಕಾನೂನಿನ ಸಬೂಬು ಹೇಳುತ್ತಾ ಶೋಷಣೆ ಮಾಡುತ್ತಿರುವ ಕಾರಣ, ಎಲೆಕ್ಟ್ರಿಕಲ್ ಇಂಜಿನಿಯರ್ ಸಹಿತ ಪ್ರಮುಖ ಸಿಬ್ಬಂದಿ ವರ್ಗಾವಣೆಯಲ್ಲಿ ತೆರಳಿದ್ದಾಗಿಯೂ ಬಹಿರಂಗ ಗೊಳಿಸಿದ್ದಾರೆ.

ನಗರಸಭಾ ಆಯುಕ್ತರ ನಡೆಯಿಂದಾಗಿ ಮಡಿಕೇರಿಯ ಜನತೆಯ ಬೇಕು-ಬೇಡಿಕೆಗಳಿಗೆ ಸದಸ್ಯರು ಸ್ಪಂದಿಸಲು ಆಗದೆ, ಕೆಲವೆಡೆ ಕೆಸರು-ಗುಂಡಿಗಳಿಂದ ಕೂಡಿರುವ ರಸ್ತೆ ಕಸದ ರಾಶಿ, ಆರೆಂಟು ತಿಂಗಳು ಸಂಬಳವಿಲ್ಲದೆ ಸಿಬ್ಬಂದಿಗೆ ಮುಖ ತೋರಿಸಲು ಆಗುತ್ತಿಲ್ಲವೆಂದು ಹರಿಹಾಯ್ದಿದ್ದಾರೆ.

ಕಡತ ನಾಪತ್ತೆ

ಸಾರ್ವಜನಿಕರು ವಿವಿಧ ಕೆಲಸಗಳ ಸಂಬಂಧ ನೀಡಿರುವ ಅರ್ಜಿಗಳು ಹಾಗೂ ಸಂಬಂಧಿಸಿದ ಕಡತವಿಲ್ಲವೆಂಬ ಉತ್ತರವಷ್ಟೇ ಲಭಿಸುತ್ತಿರುವದಾಗಿ ಅನೇಕರು ‘ಶಕ್ತಿ’ಯೊಂದಿಗೆ ಬಹಿರಂಗಗೊಳಿಸಿ ದ್ದಾರೆ. ಈ ಬಗ್ಗೆ ಕಾರಣ ಕೇಳಿದರೆ ಕಚೇರಿ ಸಿಬ್ಬಂದಿಯೊಬ್ಬರು ಒಂದು ತಿಂಗಳ ರಜೆಯಲ್ಲಿ ತೆರಳಿದ್ದು, ಈ ಕೆಲಸ ಬೇರೆಯವರಿಗೆ ವಹಿಸಿಲ್ಲವೆಂಬ ಆರೋಪವಿದೆ.

ಒಟ್ಟಿನಲ್ಲಿ ನಗರಸಭೆಯಲ್ಲಿ ಆಡಳಿತಾರೂಡ ಕಾಂಗ್ರೆಸ್ ಪ್ರಮುಖರ ಸಹಿತ, ವಿಪಕ್ಷ ಬಿಜೆಪಿ ಸದಸ್ಯರು, ಉಪಾಧ್ಯಕ್ಷರು ಸೇರಿದಂತೆ ಎಸ್‍ಡಿಪಿಐ ಸದಸ್ಯರ ಸಹಿತ ನಗರಸಭೆಯಿಂದ ಜನತೆಯ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಆಗುತ್ತಿಲ್ಲವೆಂಬ ಸಾರ್ವತ್ರಿಕ ಅಸಮಾಧಾನ ವ್ಯಕ್ತಗೊಳ್ಳತೊಡಗಿದೆ.

ಆಯುಕ್ತೆ ಸ್ಪಷ್ಟನೆ

ಈ ಎಲ್ಲ ಗೊಂದಲ ಬಗ್ಗೆ ಆಯುಕ್ತೆ ಶುಭ ಪ್ರಕಾರ, ಸ್ವಚ್ಛತಾ ಸಿಬ್ಬಂದಿ ಸಹಿತ ಕಚೇರಿಯ ಗುತ್ತಿಗೆ ನೌಕರರನ್ನು ನಿಯಮಾನುಸಾರ ನೇಮಿಸಿಕೊಳ್ಳದೆ ಸಂಬಳ ಇತ್ಯಾದಿ ನೀಡಲು ಕಾನೂನಿನ ತೊಡಕುಗಳು ಎದುರಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಕಾನೂನು ಪ್ರಕಾರ ಸಂಭಾವನೆ ನೀಡಲು ವಿಳಂಬವಾಗಿದೆ ಎಂದು ವಿವರಿಸಿದ್ದಾರೆ.

ಮಳೆ ತೊಡಕು: ನಗರಸಭೆ ಮುಂಭಾಗದಿಂದ ರಾಜಾಸೀಟ್ ವರೆಗಿನ ರಸ್ತೆ ಕಾಮಗಾರಿ, ನಗರೋತ್ಥಾನ ಯೋಜನೆಯ ಎರಡನೇ ಹಂತದಲ್ಲಿ ನಡೆದಿದ್ದು, ತೀರಾ ಹದಗೆಟ್ಟಿರುವದು ತನ್ನ ಅಧಿಕಾರ ಅವಧಿಯಲ್ಲಿ ಅಲ್ಲ. ಹೀಗಾಗಿ 3ನೇ ಹಂತದ ಕಾಮಗಾರಿಯನ್ನು ಮಳೆಯಿಂದಾಗಿ ತಡೆಹಿಡಿಯಲಾಗಿದೆ. ಮಳೆಗಾಲದ ಬಳಿಕ ಮುಂದಿನ ಡಿಸೆಂಬರ್ ವೇಳೆಗೆ ಈ ಕೆಲಸ ಕೈಗೊಳ್ಳಲಾಗುತ್ತದೆ ಎಂದು ಶುಭ ತಿಳಿಸಿದ್ದಾರೆ.

ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ಗಮನಿಸಿದರೆ, ಏಕಪೀಠದಲ್ಲಿರುವ ನವಗ್ರಹಗಳ ಮೂರ್ತಿಗಳು ಒಂದೊಂದು ದಿಕ್ಕು ನೋಡುತ್ತಿರುವ ಅನುಭವ ವಾಗತೊಡಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯ ಮೇಲಾಟ, ಅಧಿಕಾರ ಪ್ರತಿಷ್ಠೆ, ಸ್ವಹಿತಾಸಕ್ತಿ ಬದಿಗಿರಿಸಿ ಕಾರ್ಯೋನ್ಮು ಖರಾಗುವತ್ತ ಎಲ್ಲರು ಕಾಳಜಿ ತೋರಬೇಕಿದೆ. ?ಶ್ರೀಸುತ