ಮಡಿಕೇರಿ, ಆ. 10: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ಸಹಿತ, ವಾಹನಗಳ ಓಡಾಟ ಮತ್ತು ಜನಸಂದಣಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ನಗರಸಭಾ ಆಡಳಿತ ವ್ಯವಸ್ಥೆ ರೂಪಿಸಿಲ್ಲವೆಂಬ ಸಾರ್ವಜನಿಕ ಟೀಕೆಗಳ ಬಗ್ಗೆ, ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗುವದು ಎಂದು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಸುಳಿವು ನೀಡಿದ್ದಾರೆ.
ನಗರದ ಸಂಚಾರ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ಸೇರಿದಂತೆ ರಸ್ತೆಗಳು ತೀರಾ ಹದಗೆಟ್ಟಿದ್ದು, ದೇಶ ವಿದೇಶಗಳ ಪ್ರವಾಸಿಗರ ಸಹಿತ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಪೊಲೀಸ್ ಇಲಾಖೆಯಿಂದ ಸಂಚಾರ ನಿಯಮದೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಡಚಣೆಗಳು ಎದುರಾಗುತ್ತಿರುವದರಿಂದ ಕಾನೂನು ಪ್ರಾಧಿಕಾರದ ಗಮನ ಸೆಳೆಯಲಾಗುವದು ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ.
ರಾಜಾಸೀಟ್ನಲ್ಲಿ ಸುಲಿಗೆ : ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್ ಮಾರ್ಗದಲ್ಲಿ ಯಾವ ವಾಹನ ಸಂಚಾರಕ್ಕೂ ಅವಕಾಶ ನೀಡದೆ, ಆ ರಸ್ತೆಯಲ್ಲಿ ತೆರಳುವ ವಾಹನಗಳನ್ನು ನಗರಸಭೆಯ ಗುತ್ತಿಗೆದಾರರು ಬಲವಂತವಾಗಿ ತಡೆದು ನಿತ್ಯ ಸುಲಿಗೆ ಮಾಡುತ್ತಿರುವ ಬಗ್ಗೆಯೂ ಲಿಖಿತ ರೂಪದಲ್ಲಿ ಕಾನೂನು ಪ್ರಾಧಿಕಾರದ ಗಮನ ಸೆಳೆಯುವದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ದೂರಿಕೊಂಡಿದ್ದಾಗಿ ಅವರು ಸುಳಿವು ನೀಡಿದರು.
(ಮೊದಲ ಪುಟದಿಂದ) ವಾಹನಗಳ ನಿಲುಗಡೆ ವ್ಯವಸ್ಥೆ, ಸೂಚನಾ ಫಲಕ, ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸದೆ ಕೇವಲ ದುಬಾರಿ ವಾಹನ ಶುಲ್ಕ ವಸೂಲಿ ಮಾಡುತ್ತಿರುವದು ಜನವಲಯದಲ್ಲಿ ನಗರಸಭೆ ವಿರುದ್ಧ ಅಸಮಾಧಾನಕ್ಕೆ ಕಾರಣವೆಂದು ವಿವರಿಸಿದ ಪೊಲೀಸ್ ಅಧೀಕ್ಷಕರು, ಹದಗೆಟ್ಟಿರುವ ರಸ್ತೆ ಬಗ್ಗೆಯೂ ಜನ ಪೊಲೀಸರನ್ನೇ ಕೇಳುವಂತಾಗಿದೆ ಎಂದು ವಿಷಾದಿಸಿದರು.
ರಸ್ತೆ ಅತಿಕ್ರಮಣ : ಮಡಿಕೇರಿಯ ಸೌಂದರ್ಯಕ್ಕೆ ಭಂಗವಾಗುವ ರೀತಿ ಕಾನೂನು ಬಾಹಿರ ಮಳಿಗೆಗಳು, ಕಟ್ಟಡಗಳು, ಗೂಡಂಗಡಿಗಳು ರಸ್ತೆ ಜಾಗ ಅತಿಕ್ರಮಿಸಿಕೊಂಡು ತಲೆಯೆತ್ತುತ್ತಿ ದ್ದರೂ, ನಗರಸಭೆ ಗಮನ ಹರಿಸಿಲ್ಲ ವೆಂದ ಅವರು, ತಾವು ಖುದ್ದಾಗಿ ಈ ಬಗ್ಗೆ ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನ ವಾಗಿಲ್ಲವೆಂದು ಮಾರ್ನುಡಿದರು. ಪ್ರಸಕ್ತ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ರಸ್ತೆಗೆ ಹೊಂದಿಕೊಂಡಂತೆ ಗೂಡಂಗಡಿಗಳ ಸಹಿತ ಗುಡಿಸಲುಗಳಿಗೆ ಹುನ್ನಾರ ನಡೆದಿದ್ದು, ಶಾಲಾ - ಕಾಲೇಜು ಹೆಣ್ಣು ಮಕ್ಕಳು ಈ ಮಾರ್ಗದಲ್ಲಿ ಸಂಚರಿಸಲು ಕಿರಿ ಕಿರಿ ಅನುಭವಿಸುತ್ತಿರುವದಾಗಿ ಸುಳಿವು ನೀಡಿದರು.
ನಗರದಲ್ಲಿ ಹದಗೆಟ್ಟಿರುವ ರಸ್ತೆಗಳು, ವಾಹನಗಳ ನಿಲುಗಡೆ ವ್ಯವಸ್ಥೆ, ಸಂಚಾರ ನಿಯಮ ಪಾಲಿಸಲು ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕಾನೂನು ಪ್ರಾಧಿಕಾರದಿಂದ ನಗರಸಭೆಗೆ ನಿರ್ದೇಶನ ಕೊಡಿಸುವ ಮೂಲಕ ಸಾರ್ವಜನಿಕ ತೊಂದರೆಗಳನ್ನು ನಿವಾರಿಸಲು ತಾವು ಪ್ರಯತ್ನಿಸುವದಾಗಿ ಎಸ್ಪಿ ಕಳಕಳಿ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ವಾಹನ ದಟ್ಟಣೆ ಮತ್ತು ಸುಗಮ ಸಂಚಾರ ವ್ಯವಸ್ಥೆಯತ್ತ ನಗರಸಭೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳದಿದ್ದರೆ ಮುಂದೆ ಗಂಭೀರ ಸಮಸ್ಯೆ ಎದುರಾಗಲಿದೆ ಎಂದು ರಾಜೇಂದ್ರ ಪ್ರಸಾದ್ ಕಳವಳ ವ್ಯಕ್ತಪಡಿಸಿದರು.