ಮಡಿಕೇರಿ, ಆ. 10: ಮಡಿಕೇರಿ ನಗರಸಭೆಯ ಮೂರನೇ ಅವಧಿಗೆ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವ್ಯತಿರಿಕ್ತವಾಗಿ ಮತ ಚಲಾಯಿಸಿದ್ದಾರೆ ಎಂಬ ಆರೋಪದಡಿ ಸದಸ್ಯರಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರುಗಳ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್‍ನ ಆದೇಶವನ್ನು ಪ್ರಶ್ನಿಸಿ ಜಿಲ್ಲಾ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ವ್ಯತಿರಿಕ್ತ ಮತ ಚಲಾಯಿಸದಂತೆ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ವ್ಹಿಪ್ ಜಾರಿಯಲ್ಲಿನ ತಾಂತ್ರಿಕ ದೋಷದಿಂದಾಗಿ ಅರ್ಜಿ ತಿರಸ್ಕøತಗೊಂಡಿದ್ದು, ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿಗೆ ವರದಾನ ವಾದಂತಾಗಿದೆ.
ಕಳೆದ ತಾ. 9.9.2016 ರಂದು ನಗರಸಭಾ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಸಂದರ್ಭ ಜಿಲ್ಲಾ ಕಾಂಗ್ರೆಸ್‍ನ ಪ್ರಬಾರ ಅಧ್ಯಕ್ಷರಾಗಿದ್ದ ಟಿ.ಪಿ. ರಮೇಶ್ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಆಚಾರ್ಯ ಅವರುಗಳಿಗೆ ಮತ ಚಲಾಯಿಸುವಂತೆ ವ್ಹಿಪ್ ಜಾರಿಗೊಳಿಸಿದ್ದರು. ಆದರೆ ಶ್ರೀಮತಿ ಹಾಗೂ ವೀಣಾಕ್ಷಿ ವ್ಹಿಪ್ ಉಲ್ಲಂಘಿಸಿ ವಿರೋಧ ಪಕ್ಷದವರಿಗೆ ಮತ ಚಲಾಯಿಸಿದ್ದಾರೆಂದು ಆರೋಪಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತಲ್ಲದೆ, ನಗರಸಭಾ ಸದಸ್ಯತ್ವ ಸ್ಥಾನ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಇಬ್ಬರ ಸದಸ್ಯತ್ವನ್ನು ರದ್ದುಗೊಳಿಸಿ ಆದೇಶಿಸಿದ್ದರು.
ಆದರೆ ಈ ಇಬ್ಬರು ಸದಸ್ಯರು ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪರಿಶೀಲನೆ ಮಾಡಿದ ಉಚ್ಚ ನ್ಯಾಯಾಲಯವು ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದು ಪಡಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರಾಗಿದ್ದ ಟಿ.ಪಿ. ರಮೇಶ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಾಧೀಶ ಪಿ.ಎಸ್. ದಿನೇಶ್ ಕುಮಾರ್ ಅವರುಗಳಿದ್ದ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸಿ ಜುಲೈ 31 ರಂದು ತೀರ್ಪು ನೀಡಿದೆ.
ಕೆಪಿಸಿಸಿ ಅಧ್ಯಕ್ಷರು ಕಾರ್ಯದರ್ಶಿ ಅಥವಾ ಜಿಲ್ಲಾಧ್ಯಕ್ಷರಿಗೆ ನೇರವಾಗಿ ವ್ಹಿಪ್ ಜಾರಿ ಮಾಡಲು ಆದೇಶ ನೀಡಬಹುದಾಗಿದೆ. ಆದರೆ ಕಾರ್ಯದರ್ಶಿ ಜಿಲ್ಲಾಧ್ಯಕ್ಷರಿಗೆ ವ್ಹಿಪ್ ಜಾರಿಗೊಳಿಸುವಂತೆ ಆದೇಶ ನೀಡುವಂತಿಲ್ಲ. ಈ ಪ್ರಕರಣದಲ್ಲಿ ಅಧ್ಯಕ್ಷರ ಆದೇಶದ ಬಳಿಕ ಮಧ್ಯಸ್ಥನಂತೆ ಕಾರ್ಯದರ್ಶಿ ಜಿಲ್ಲಾಧ್ಯಕ್ಷರಿಗೆ ಆದೇಶ ನೀಡಿದ್ದಾರೆ. ಮಧ್ಯಸ್ಥರಿಗೆ ಇಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕರಿಸಿದೆ. ಈ ತೀರ್ಪಿನಿಂದಾಗಿ ಇಬ್ಬರು ಸದಸ್ಯರು ನಗರಸಭಾ ಸದಸ್ಯರಾಗಿ ಮುಂದುವರಿಯಬಹುದಾಗಿದೆ.