ಕೂಡಿಗೆ, ಆ. 10: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಿಂದ ವರ್ಷಂಪ್ರತಿಯಂತೆ ರೈತರ ಬೆಳೆಗಳಿಗೆ ನೀರು ಪೂರೈಸುವ ದೃಷ್ಟಿಯಿಂದ ನಾಲೆಗಳ ಮೂಲಕ ನೀರನ್ನು ಹರಿಸಲಾಗುತ್ತದೆ. ಆದರೆ, ಹಾರಂಗಿ ಅಣೆಕಟ್ಟೆ ಭರ್ತಿಯಾಗಿ 20 ದಿನಗಳು ಕಳೆದರೂ ನಾಲೆಗಳಿಗೆ ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ, ಧರಣಿ ಕೈಗೊಂಡು ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲಿ ಸರ್ಕಾರದ ಆದೇಶದಂತೆ ಅನುಕೂಲವಾಗುವಂತೆ ಹಂತ ಹಂತವಾಗಿ 1200 ಕ್ಯೂಸೆಕ್ ನೀರನ್ನು ನಾಲೆಗೆ ಹರಿಯಬಿಡಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿಗಳ ಸಭೆಯಲ್ಲಿ ಹಾರಂಗಿ ಅಣೆಕಟ್ಟೆಗೆ ಸಂಬಂಧಪಟ್ಟಂತೆ ತೀರ್ಮಾನ ಕೈಗೊಂಡು, ಕಾವೇರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕೆರೆಕಟ್ಟೆಗಳು ತುಂಬಲು ಹಾಗೂ ಕುಡಿಯುವ ನೀರಿಗೆ ಅನುಕೂಲವಾಗು ವಂತೆ ನೀರನ್ನು ಹರಿಸಬೇಕೆಂದು ಸೂಚನೆ ಬಂದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯ ಅಧಿಕಾರಿಗಳು ಇಂದು ಅಚ್ಚುಕಟ್ಟು ಪ್ರದೇಶದ ಮುಖ್ಯನಾಲೆಗೆ ನೀರನ್ನು ಹರಿಯಬಿಟ್ಟರು.
ಹಾರಂಗಿ ಜಲಾನಯನ ಪ್ರದೇಶ ಗಳಾದ ಕೊಡಗು, ಹುಣಸೂರು, ಪಿರಿಯಾಪಟ್ಟಣ ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರೈತರು ಭತ್ತದ ಬೆಳೆ ಹೊರತುಪಡಿಸಿ ಅರೆಕಾಲಿಕ ಬೆಳೆಗಳನ್ನು ಬೆಳೆಯಲು ನೀರನ್ನು ಉಪಯೋಗಿಸಿಕೊಳ್ಳ ಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಹಾರಂಗಿ ಅಣೆಕಟ್ಟೆಯು ಗರಿಷ್ಠ ಮಟ್ಟ 2857.70 ಕ್ಯೂಸೆಕ್ ಇದ್ದು, ಒಳಹರಿವು 7000 ಕ್ಯೂಸೆಕ್ ಇದೆ. ನದಿಗೆ ಮುಖ್ಯ ಗೇಟ್ಗಳ ಮೂಲಕ 500 ಕ್ಯೂಸೆಕ್, ವಿದ್ಯುತ್ ಘಟಕದ ಮೂಲಕ 2500 ಕ್ಯೂಸೆಕ್ ಸೇರಿ ನದಿಗೆ 3000 ಕ್ಯೂಸೆಕ್ ನೀರು ಹರಿಯುತ್ತಿದೆ. ಜಲಾಶಯದ ಮೇಲ್ಭಾಗದಲ್ಲಿನ ಮಳೆಯ ಪ್ರಮಾಣವನ್ನು ಅರಿತು ಜಲಾಶಯದ ಭದ್ರತೆಯ ಹಿತದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಯಬಿಡಲಾಗುತ್ತದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ಮಾಹಿತಿ ನೀಡಿದರು.