ಮಡಿಕೇರಿ, ಆ. 12: ಕೊಡಗಿನ ಕಾಳಿದಾಸ... ಶೇಕ್ಸ್ಪಿಯರ್ ಎಂದೇ ಪ್ರತಿಬಿಂಬಿತಗೊಂಡಿರುವ ಕೊಡವ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಗೆ ವಿಶಿಷ್ಟವಾದ ಗೌರವಯುತವಾದ ಸ್ಥಾನಮಾನವಿದೆ. ಮಹಾನ್ ಸಾಧನೆ ಮಾಡಿರುವ ಈ ಕವಿಯ 150ನೇ ಜನ್ಮದಿನೋತ್ಸವದ ಸುಸಂದರ್ಭವೂ ಇದು... ಇದರೊಂದಿಗೆ ವಿಶೇಷವಾಗಿ ಗುರುತಿಸಿಕೊಂಡಿರುವ ಕೊಡವ ಸಂಸ್ಕøತಿ, ಆಚಾರ- ವಿಚಾರ, ಪದ್ಧತಿ- ಪರಂಪರೆಗಳನ್ನು ಒಳಗೊಂಡ ಕೊಡವ - ಕೊಡವ ಭಾಷಿಕರ ಎಲ್ಲಾ ವಿಚಾರಗಳನ್ನು ಒಳಗೊಂಡಂತೆ ಸಮಗ್ರವಾದ ದಾಖಲೆಯನ್ನು ತಯಾರಿಸಿ ಮಹತ್ವಪೂರ್ಣವಾಗಿ ನಡೆಸಲಾದ ಪ್ರಯತ್ನವೊಂದು ಇಂದು ಕೊಡವ- ಕೊಡವ ಭಾಷಿಕ ಜನಾಂಗಕ್ಕೆ ಸಮರ್ಪಣೆಗೊಂಡಿತು. ಕಳೆದ ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ತಾ. 13ರಂದು (ಇಂದು) ಮುಕ್ತಾಯಗೊಳ್ಳಲಿದ್ದು, ಇದಕ್ಕೆ ಮುನ್ನಾ ದಿನವಾದ ಇಂದು ಈ ಎರಡು ಅಂಶಗಳನ್ನು ಒಳಗೊಂಡಂತೆ ಅಕಾಡೆಮಿ ಹಾಕಿಕೊಂಡ ಕಾರ್ಯಯೋಜನೆ ಕೊಡವ ಸಮುದಾಯಕ್ಕೆ ವಿಶೇಷ ಕೊಡುಗೆಯಾಗಲಿದೆ. ಕೊಡವ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಸಹಯೋಗದಲ್ಲಿ ನಗರದ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರದಾಸ ಅಪ್ಪಚ್ಚಕವಿಯ ಸಂಸ್ಮರಣೆಯೊಂದಿಗೆ ಅವರ ಅಧ್ಯಯನ ಗ್ರಂಥ ಹೊರತಂದಿರುವದು ಅಪರೂಪದ ಕವಿಗೆ ಪುನರ್ಜನ್ಮ ನೀಡಿದಂತಾಗಿದೆ ಎಂಬ ಅಭಿಪ್ರಾಯದೊಂದಿಗೆ ಹರದಾಸರಿಗೆ ಅವರೊಬ್ಬರೇ ಸರಿಸಾಟಿಯಾಗಿದ್ದರು ಎಂಬ ರೀತಿಯಲ್ಲಿ ಪುರಾತನ ಕಾಲದ ನೆನಪು ಮರುಕಳಿಸಿತು. ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ಪ್ರಯತ್ನದೊಂದಿಗೆ ಕೊಡಗಿನ ಕಾಳಿದಾಸ ಅಪ್ಪಚ್ಚಕವಿ ಅಧ್ಯಯನ ಗ್ರಂಥ ಬಿಡುಗಡೆ, ಎರಡು ಫೆಲೋಶಿಪ್ ಕೃತಿ ಹಾಗೂ ಕೊಡವ- ಕೊಡವ ಭಾಷಿಕರ ಆಚಾರ - ವಿಚಾರದ ಸಮಗ್ರ ದಾಖಲೀಕರಣದ ಬಿಡುಗಡೆ ಬಿದ್ದಾಟಂಡ ಎಸ್. ತಮ್ಮಯ್ಯ ನೇತೃತ್ವದ ಅಕಾಡೆಮಿಯ ಹಾಲಿ ಆಡಳಿತ ಮಂಡಳಿಯ ವಿದಾಯಕ್ಕೆ ವಿಶೇಷ ಮೆರುಗು ನೀಡಿತು.
ಕವಿಗೆ ಪುನರ್ಜನ್ಮ
ಅಧ್ಯಯನ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಈ ಗ್ರಂಥ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿದೆ. ಈ ಪುಸ್ತಕ ಕವಿಗೆ ಪುನರ್ಜನ್ಮ ನೀಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಅಪ್ಪಚ್ಚಕವಿಗೆ ಆಗಿನ ಕಾಲದಲ್ಲಿ ಅಗತ್ಯ ಸಂದರ್ಭದಲ್ಲಿ ಪ್ರೋತ್ಸಾಹ, ಸಹಕಾರ, ಪ್ರಚಾರ ದೊರೆತಿರಲಿಲ್ಲ. ಅವರು ನೈಜತೆ ಹೊಂದಿದ್ದ ಕವಿ ಎಂದು ಬಣ್ಣಿಸಿದ ಅವರು, ಜನತೆಯಿಂದಲೂ ಅವರಿಗೆ ಅಭಿಮಾನದ ಕೊರತೆ ಇತ್ತು. ನಿಧಾನಗತಿಯಲ್ಲಿ ಎಲ್ಲರಿಗೂ ಮೇರುಕವಿಯ ಮಹತ್ವದ ಅರಿವಾಯಿತು ಎಂದು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಡಾ. ಕಾಳಿಮಾಡ ಶಿವಪ್ಪ ಅವರು ಅನಿಸಿಕೆ ವ್ಯಕ್ತಪಡಿಸಿ ಅಪ್ಪಚ್ಚಕವಿ ಓರ್ವ ಅದ್ಭುತ ವ್ಯಕ್ತಿ, ಹರದಾಸ ಖ್ಯಾತಿಯ ಅವರಿಗೆ ಇತರರ ಹೋಲಿಕೆ ಸರಿಯಾಗದು. ಅವರಿಗೆ ಅವರೊಬ್ಬರೇ ಸರಿಸಾಟಿ. ಇಂತಹ ಆದರ್ಶ, ವಿಚಾರಧಾರೆಗಳು ಎಲ್ಲರಿಗೂ ತಲಪುವಂತಾಗಬೇಕೆಂದರು.
ಅಧ್ಯಯನ ಸ್ವಾಗತಾರ್ಹ: ಲೋಕೇಶ್
ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹಾಗೂ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಸಂಯೋಜಕ ಡಾ. ಕೋಡೀರ ಲೋಕೇಶ್ ಅವರು ಮಾತನಾಡಿ, ಕೊಡವ ಅಕಾಡೆಮಿ ಮೂರು ವರ್ಷಗಳಲ್ಲಿ 105 ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಚಟುವಟಿಕೆ ನಡೆಸಿದೆ. ಅದರಲ್ಲೂ ಇದು ಮಹತ್ವ ಪೂರ್ಣವಾದ ಕಾರ್ಯಯೋಜನೆ. ಪ್ರಸ್ತುತ ಕೊಡವ ಸಂಸ್ಕøತಿ, ಜಿಲ್ಲೆ, ಆಚಾರ- ವಿಚಾರಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯುತ್ತಿರುವದು ಸ್ವಾಗತಾರ್ಹ ವಾಗಿದೆ. ಮೂಲ ಸಂಸ್ಕøತಿಯ ಮೇಲೆ ಅನ್ಯ ಸಂಸ್ಕøತಿಯ ಧಾಳಿಯಾಗುತ್ತಿರುವ ಕ್ಲಿಷ್ಟ ಸಂದರ್ಭದಲ್ಲಿ ಸಮಗ್ರ ದಾಖಲೀಕರಣ ಮಾಡಿರುವದು ಕೊಡವ ಸಂಸ್ಕøತಿಯ ಉಳಿವಿಗೆ ಪೂರಕವಾಗಲಿದೆ ಎಂದರು. ಇಂತಹ ಪ್ರಯತ್ನಕ್ಕೆ ಅಧ್ಯಯನ ಪೀಠದಿಂದಲೂ ಸಹಕಾರ ನೀಡಲಾಗುವದು ಎಂದರು.
ಸಾಹಿತಿ ನಾಗೇಶ್ ಕಾಲೂರು ಅವರು ಅನಿಸಿಕೆ ವ್ಯಕ್ತಪಡಿಸಿ ಅಪ್ಪಚ್ಚಕವಿಗೆ ಆಗಿನ ಸಂದರ್ಭದಲ್ಲಿ ಬರಹವನ್ನು ಓದುಗರಿಗೆ ತಲಪಿಸಲು ಕಷ್ಟವಿತ್ತು. ಅವರ ಪುಸ್ತಕವನ್ನು, ಸಾಹಿತ್ಯ, ಆದರ್ಶವನ್ನು ಅರಿತು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಸಂಸ್ಕøತಿಯನ್ನು ಉಳಿಸಿ ಪೋಷಿಸುವ ಅಗತ್ಯದ ಬಗ್ಗೆ ಕವಿ ಈ ಹಿಂದೆಯೇ ಸಂದೇಶ ನೀಡಿದ್ದಾರೆ. ಇದರ ಪರಿಪಾಲನೆಯಾಗಬೇಕೆಂದರು.
ಅಧ್ಯಯನ ಗ್ರಂಥ ಸಿದ್ಧಪಡಿಸಿದ ಸಾಹಿತಿ, ಐತಿಚಂಡ ರಮೇಶ್ ಉತ್ತಪ್ಪ ಅವರು ಮಾತನಾಡಿ, ಅಪ್ಪಚ್ಚಕವಿಯ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳಿಗೆ ಈ ಪುಸ್ತಕದಲ್ಲಿ ಉತ್ತರ ಇದೆ. ಅವರ ಪ್ರತಿಭೆ, ಸಾಧನೆ ಅಪಾರವಾದದ್ದು. ಈಗಿನ ಮಕ್ಕಳಿಗೆ ಚಿಕ್ಕಂದಿನಲ್ಲೇ ಇದರ ಪರಿಚಯವಾದರೆ ಅವರು ಭವಿಷ್ಯದ ಸಾಹಿತಿ ಆಗುತ್ತಾರೆ ಎಂದರಲ್ಲದೆ, ತಮ್ಮ ಸಂಶೋಧನೆಯ ಪ್ರಯತ್ನವನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಅವರು ಅಕಾಡೆಮಿ ಮೂರು ವರ್ಷಗಳಲ್ಲಿ ಉತ್ತಮ ಚಟುವಟಿಕೆ ನಡೆಸಿದೆ. ಅದರಲ್ಲಿ ಅಪ್ಪಚ್ಚಕವಿಯ ಅಧ್ಯಯನ ಗ್ರಂಥ ಹಾಗೂ ಕೊಡವ ಸಮಗ್ರ ದಾಖಲೀಕರಣ ಮಹತ್ವದ್ದಾಗಿದ್ದು, ಇದು ಸಮುದಾಯಕ್ಕೆ ಕೊಡುಗೆಯಾಗಲಿದೆ ಎಂದರು.
ಅತಿಥಿಗಳಾಗಿದ್ದ ಅಪರ ಜಿಲ್ಲಾಧಿಕಾರಿ ಎಂ. ಸತೀಶ್ಕುಮಾರ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್, ಮೂಡಾ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ, ಸಾಹಿತಿ ಚೆಕ್ಕೇರ ತ್ಯಾಗರಾಜ್, ಮೈಸೂರು ರಂಗಾಯಣದ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಐ. ಬಾವಿಕಟ್ಟಿ ಅವರುಗಳು ಮಾತನಾಡಿದರು.
ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಹಾಜರಿದ್ದರು. ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಪ್ಪಚ್ಚಕವಿ ರಚಿತ ಗೀತೆಗಳನ್ನು ಡಾ. ಶಿವಪ್ಪ ಹಾಗೂ ಚೆಕ್ಕೇರ ತ್ಯಾಗರಾಜ್ ಹಾಡಿದರು. ಫಲಾನುಭವಿಗಳಿಗೆ ಮೇದಪರೆ ಹಾಗೂ ದುಡಿ ಪರಿಕರ ವಿತರಿಸಲಾಯಿತು.
ಚೇಂದಿರ ನಿರ್ಮಲಾ ಬೋಪಣ್ಣ ತಂಡದಿಂದ ನಾಡಗೀತೆ, ಮುಂಡಚಾಡಿರ ರಿನಿ ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಅಕಾಡೆಮಿ ಸದಸ್ಯ ಚೋವಂಡ ಎಸ್. ಬೋಪಯ್ಯ ಸ್ವಾಗತಿಸಿ, ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು. ಡಾ. ತೀತಿರ ರೇಖಾ ವಸಂತ್ ವಂದಿಸಿದರು.
ಸರ್ವರ ಸಹಕಾರದಿಂದ ಯಶಸು : ತಮ್ಮಯ್ಯ
ಎಲ್ಲರ ಸಹಕಾರದಿಂದಿಗೆ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಯಶಸ್ಸು ಕಾಣಲಾಗಿದೆ ಎಂದು ಅಕಾಡೆಮಿಯ ನಿರ್ಗಮಿತ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಅಕಾಡೆಮಿ ಸದಸ್ಯರ ಹಾಗೂ ಪ್ರತಿಯೊಬ್ಬರ ಸಹಕಾರದಿಂದ ಅಕಾಡೆಮಿಯ ಕೆಲಸ ಕಾರ್ಯಗಳನ್ನು ನಮ್ಮ ಅಧಿಕಾರಾವಧಿಯಲ್ಲಿ ಸರಕಾರದ ನಿಯಮ ಹಾಗೂ ಕಾನೂನು ರೀತಿಯಲ್ಲಿ ರೂಪಿಸಿ 103 ವೈವಿಧÀ್ಯಮಯ ಕಾರ್ಯಕ್ರಮಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಅಕಾಡೆಮಿಯ ಕಚೇರಿಗೆ ಕಾಯಕಲ್ಪ ನೀಡುತ್ತಾ ಕಾರ್ಯಕ್ರಮಗಳನ್ನು ಕಾನೂನಾತ್ಮಕ ರೀತಿಯಲ್ಲಿ ನಡೆಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹಿಂದಿನ ಸಹಾಯಕ ನಿರ್ದೇಶಕ ಬಾವಿಕಟ್ಟಿ ಅವರ ಸಲಹೆಯಂತೆ ಮುಂದುವರೆಸಿಕೊಂಡು ಬಂದಿರುವದಾಗಿ ಹೇಳಿದರು.
ತಮ್ಮ ಅವಧಿಯಲ್ಲಿ ಮೂಲ ಸಂಸ್ಕøತಿ ಹಾಗೂ ಪರಂಪರೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪುಸ್ತಕ ಪ್ರಕಟಣೆ, ರಂಗಭೂಮಿ, ಸಾಂಸ್ಕøತಿಕ ಚಟುವಟಿಕೆ, ಸಂಗೀತ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ, ಅವುಗಳನ್ನು ದಾಖಲೀಕರಣಗೊಳಿಸಿದ್ದೇವೆ, ಜಿಲ್ಲೆಯ ತೆರೆಮರೆಯಲ್ಲಿದ್ದ ಪ್ರತಿಭಾನ್ವಿತ ಕಲಾವಿದರನ್ನು, ಸಾಹಿತಿಗಳನ್ನು ಗುರುತಿಸಿ ಮುಂಚೂಣಿಗೆ ತಂದಿದ್ದೇವೆ. ಕೆಂಬಟ್ಟಿ ಜನಾಂಗದವರಿಲ್ಲದಿದ್ದರೆ ನಮ್ಮ ಸಂಸ್ಕøತಿ ಹಾಗೂ ಪರಂಪರೆಯೇ ಇರುತ್ತಿರಲಿಲ್ಲವೇನೋ, ಈ ದಾಖಲೀಕರಣ ಕೆಲಸವನ್ನು ಕಳೆದ ಕೆಲವು 3-4 ವರ್ಷಗಳಿಂದ ಆರಂಭಿಸಿದ್ದೇವೆ, ಇದು ಕಾಟಾಚಾರದ ದಾಖಲೀಕರಣವಲ್ಲ, ಇದರಲ್ಲಿ ವಾಸ್ತವಾಂಶ, ನೈಜತೆ ಅಡಗಿದೆ. ಮುಖ್ಯವಾಗಿ ಅಕಾಡೆಮಿಗೊಳಪಡುವ ಜನಾಂಗಗಳ ಫಲಾನುಭವಿಗಳಿಗೆ ಸಮರ್ಪಕ ಪರಿಕರಗಳನ್ನು ವಿತರಿಸಿದ್ದೇವೆ ಎಂದರು.