ಶ್ರೀಮಂಗಲ, ಆ. 11: ರಾಜ್ಯ ಸರಕಾರ ಆಹಾರ ಭದ್ರತೆಯ ನೆಪದಲ್ಲಿ ಪಾಳು ಬಿಟ್ಟಿರುವ ಭತ್ತದ ಗದ್ದೆಗಳನ್ನು ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ ಕಾಲಂ 84ರ ಅನ್ವಯ ಸಾಗುವಳಿಗೆ ಒಳಪಡಿಸಲು ಪಾಳು ಬಿಟ್ಟಿರುವ ಗದ್ದೆಗಳ ವರದಿ ಕೇಳಿರುವ ಮೂಲಕ ಬೆದರಿಕೆ ತಂತ್ರವನ್ನು ರೈತರ ಮೇಲೆ ಪ್ರಯೋಗಿಸುತ್ತಿದೆ ಎಂದು ವಿರಾಜಪೇಟೆ ತಾಲೂಕು ಬೆಳೆಗಾರರ ಒಕ್ಕೂಟ ಆರೋಪಿಸಿದೆ.ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆ ಯಲ್ಲಿ ಗೋಣಿಕೊಪ್ಪ ಆರ್.ಎಂ.ಸಿ. ಸಭಾಂಗಣದಲ್ಲಿ ನಡೆದ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ರಾಜ್ಯ ಸರಕಾರ ಭತ್ತ ಸೇರಿದಂತೆ ವಿವಿಧ ಕೃಷಿ ಬೆಳೆಯಲ್ಲಿ ರೈತರು ನಷ್ಟ ಅನುಭವಿಸುತ್ತಿರುವದನ್ನು ಗಮನಿಸಿ ಬೆಲೆಯನ್ನು ನಿಗದಿಪಡಿಸಿ ಲಾಭದಾಯ ಕವಾಗಿ ಪರಿವರ್ತಿಸಲು ಮುಂದಾಗ ಬೇಕು. ಪಾಳು ಬಿಡಲು ಮುಖ್ಯ ಕಾರಣಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆಹಾರ ಭದ್ರತೆಯ ಕಾರಣ ನೀಡಿ, ಪಾಳು ಬಿಟ್ಟ ಗದ್ದೆಗಳನ್ನು ಕೃಷಿ ಮಾಡಲು ಬೆದರಿಕೆ ತಂತ್ರ ಮಾಡುತ್ತಿರುವ ಸರಕಾರ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಏಕರೆ ಭತ್ತದ ಗದ್ದೆಗಳು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗುವಾಗ ಏಕೆ ಆಹಾರ ಭದ್ರತೆಯ ಚಿಂತನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

2014-15ರ ಸಾಲಿನಲ್ಲಿ ಅತಿವೃಷ್ಟಿಗೆ ತುತ್ತಾಗಿ ಜಿಲ್ಲೆಯ 123 ಗ್ರಾಮದ ಕಾಫಿ. ಕರಿಮೆಣಸು ಫಸಲು ನಷ್ಟವಾಗಿದ್ದು, ರೈತರಿಗೆ ಪರಿಹಾರ ಒದಗಿಸಲು ರೂ. 22 ಕೋಟಿ ಅನುದಾನ ಅಗತ್ಯವಿದೆ. ಆದರೆ ಇದುವರೆಗೂ ಪರಿಹಾರ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಯವರಲ್ಲಿ ಚರ್ಚಿಸಿ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿ ಯವರನ್ನು

(ಮೊದಲ ಪುಟದಿಂದ) ಒಕ್ಕೂಟದ ನಿಯೋಗ ತೆರಳಿ ಮನವಿ ಮಾಡಲು ನಿರ್ಧರಿಸಲಾಯಿತು.

ಸರಕಾರ ಭತ್ತದ ಕೃಷಿಗೆ ಉತ್ತೇಜನವೆಂದು ಹೆಕ್ಟೇರ್‍ಗೆ 4 ಸಾವಿರ ಯಾಂತ್ರಿಕೃತ ಕೃಷಿಗೆ ನೀಡುತ್ತಿದೆ. ಆದರೆ ಯಾಂತ್ರಿಕೃತ ಹೊರತು ಪಡಿಸಿ ಸಾಂಪ್ರದಾಯಿಕವಾಗಿ ಉಳುಮೆ ಮಾಡುವವರಿಗೆ ಈ ಪ್ರೋತ್ಸಾಹಧನ ದೊರೆಯುತ್ತಿಲ್ಲ. ಎಲ್ಲಾ ರೈತರಿಗೂ ಪ್ರೋತ್ಸಾಹ ಧನ ದೊರೆಯು ವಂತಾಗಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ಕಾಫಿ ಹಾಗೂ ಕರಿಮೆಣಸು ಬಹುವಾರ್ಷಿಕ ಬೆಳೆಯಾದರೂ ಆರ್.ಟಿ.ಸಿ.ಯಲ್ಲಿ ಇವುಗಳನ್ನು ಪ್ರತಿ ವರ್ಷ ತೆಗೆಯಲಾಗುತ್ತಿದೆ. ಇದರಿಂದ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಶಾಶ್ವತವಾಗಿ ಬೆಳೆ ಕಾಲಂನಲ್ಲಿ ಕಾಫಿ ಹಾಗೂ ಕರಿಮೆಣಸನ್ನು ನಮೂದಿಸಲು ಜಿಲ್ಲಾಧಿಕಾರಿಯವರಿಗೆ ಒಕ್ಕೂಟದಿಂದ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಣ್ಣ ಹಿಡುವಳಿದಾರರು ಸಮೀಪದ ಪೈಸಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿ ಜೀವಮಾನ ಸಾಗಿಸುತ್ತಿದ್ದಾರೆ. ಇಂತವರನ್ನು ಗುರುತಿಸಿ ಕಂದಾಯ ಇಲಾಖಾಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾಗುತ್ತಿದ್ದು, ನೂರಾರು ಎಕರೆ ಒತ್ತುವರಿ ಮಾಡಿಕೊಂಡವರ ಬಗ್ಗೆ ಸರಕಾರ ತೆರವಿಗೆ ಮುಂದಾಗದೆ, ಸಣ್ಣ ಹಿಡುವಳಿದಾರರಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಜೇಮ್ಸ್ , ನಿವೃತ್ತ ಎಸ್ಪಿ ಮುಕ್ಕಾಟಿರ ಚೋಟು ಅಪ್ಪಯ್ಯ, ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ, ಮಾಪಂಗಡ ಯಮುನಾ ಚಂಗಪ್ಪ, ಚೇದಂಡ ಸುಮಿ ಸುಬ್ಬಯ್ಯ, ಆರ್.ಎಂ.ಸಿ. ಸದಸ್ಯೆ ಬೊಳ್ಳಜಿರ ಸುಶೀಲಾ ಅಶೋಕ್, ಮನ್ನೇರ ಸರಸ್ವತಿ, ಮಾಜಿ ತಾ.ಪಂ. ಅಧ್ಯಕ್ಷ ಅಮ್ಮತ್ತಿರ ರೇವತಿ ಪರಮೇಶ್ವರ, ಸಣ್ಣುವಂಡ ನಂದುಣು, ಬಾಳೆಲೆಯ ಪೋಡಮಾಡ ಉತ್ತಪ್ಪ, ಮಾಚಂಗಡ ಮಾಚಯ್ಯ, ಅರಮಣಮಾಡ ಸತೀಶ್, ಚೆಪ್ಪುಡಿರ ಕಿರಣ್, ಕೈಬುಲಿರ ಚೇತನ್, ಕುಟ್ಟದ ಬೊಳ್ಳೇರ ರಾಜನಂಜಪ್ಪ ಕಾಕೇರ ಸುರೇಶ್, ಶಿವಚಾರರ ರಾಜೇಂದ್ರಪ್ರಸಾದ್, ಜಮ್ಮಡ ಮೋಹನ್ ಮಾದಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.