ಮಡಿಕೇರಿ, ಆ. 12: ವಿಶಾಲವಾದ ಗದ್ದೆ..., ಕಾಲಿಟ್ಟರೆ ಮೊಣಕಾಲಿನವರೆಗೂ ಕೆಸರು..., ಈ ಕೆಸರಿನ ನಡುವೆಯೂ ಓಟ, ಹಗ್ಗ ಜಗ್ಗಾಟ..., ವಾಲಿಬಾಲ್ ಕ್ರೀಡೆಗಳ ಕಲರವ...ಕೊಡಗು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ಇಂದು ನಡೆದ 26ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡೋತ್ಸವ ನೋಡುಗರ ಗಮನ ಸೆಳೆಯಿತು.
ವಿವಿಧೆಡೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಕೆಸರು ತುಂಬಿದ್ದ ಗದ್ದೆಯಲ್ಲಿ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದರು. ಸ್ಪರ್ಧಿಗಳು ಗದ್ದೆಯಲ್ಲಿ ಬಹುಮಾನಕ್ಕಾಗಿ ಸೆಣಸಿದರೆ ಗದ್ದೆಯ ದಡದಲ್ಲಿ ಕಿಕ್ಕಿರಿದು ತುಂಬಿದ್ದ ಕ್ರೀಡಾಭಿಮಾನಿಗಳು ಶಿಳ್ಳೆ- ಚಪ್ಪಾಳೆಗಳ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದರು. ಓಟದ ಸ್ಪರ್ಧೆಯ ಕೆಸರು ನೀರನ್ನು ಲೆಕ್ಕಿಸದೆ ಓಡುತ್ತಿದ್ದ ಸ್ಪರ್ಧಿಗಳು ಓಟ ಮುಗಿಸುವ ವೇಳೆಗೆ ತಲೆಯಿಂದ ಪಾದದವರೆಗೂ ಕೆಸರಿನ ಸ್ನಾನಕ್ಕೊಳಗಾಗುತ್ತಿದ್ದರು. ಮಕ್ಕಳು ಕೂಡ ಕೆಸರಿನಲ್ಲಿ ನಿಲ್ಲಲು ಸಾಧ್ಯವಾಗದಿದ್ದರೂ ಪೈಪೋಟಿಗಿಳಿದು ಗಮನ ಸೆಳೆದರು. ವಾಲಿಬಾಲ್ ಪಂದ್ಯಾಟದಲ್ಲಿ ‘ಸ್ಮ್ಯಾಷರ್’ಗಳ ಒಂದೊಂದು ಹೊಡೆತಗಳು ಕೆಸರು ಗದ್ದೆಯಲ್ಲೂ ಎದುರಾಳಿಗಳಿಗೆ ಮೈಬಿಸಿ ಏರುವಂತೆ ಮಾಡುತ್ತಿತ್ತು. ಮೊಣಕಾಲಿನವರೆಗೂ ತುಂಬಿದ್ದ ಕೆಸರಿನಲ್ಲಿ ಚೆಂಡಿಗಾಗಿ ಅತ್ತಿಂದಿತ್ತ ಓಡಾಡುತ್ತಾ ಬಿದ್ದು ಎದ್ದು, ಆಟವಾಡುತ್ತಿದ್ದ ವಾಲಿಬಾಲ್ ಪಟುಗಳು ಕ್ರೀಡಾಭಿಮಾನಿಗಳಿಗೆ ರಸದೌತಣ ಒದಗಿಸಿದರು.
ಇನ್ನು ಹಗ್ಗಜಗ್ಗಾಟದ ‘ಖದರ್‘ನ್ನು ನೋಡಿಯೇ ಸವಿಯಬೇಕು. ಕೆಸರು ಗದ್ದೆಯಲ್ಲಿ ಸರಿಯಾಗಿ ನಿಲ್ಲುವದೆ ಒಂದು ಸಾಹಸ. ಆದರೆ ಅದೇ ಜಾಗದಲ್ಲಿ ಹಗ್ಗಜಗ್ಗಾಟವೆಂದರೆ ಹೇಗಿರಬೇಡ? ಪುರುಷರು ಹಾಗೂ ಮಹಿಳೆಯರಿಗಾಗಿ ನಡೆದ ಹಗ್ಗಜಗ್ಗಾಟ ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಎರಡೂ ಬದಿಗಳಿಂದಲೂ ದೇಹದಲ್ಲಿರುವ ಶಕ್ತಿಯನ್ನೆಲ್ಲಾ ಬಳಸಿ ಹಗ್ಗವನ್ನು ಎಳೆದಾಡುತ್ತಿದ್ದ ಕ್ರೀಡಾಪಟುಗಳ ಎದೆಗಾರಿಕೆ ಕಂಡು ಎಂಥವರೂ ಒಮ್ಮೆ ‘ಭೇಷ್’ ಎನ್ನಲೇಬೇಕು. ಆ ರೀತಿಯಿತ್ತು ಹಗ್ಗಜಗ್ಗಾಟದ ‘ಖದರ್’!! ಮಹಿಳೆಯರ ಥ್ರೋಬಾಲ್ ಪಂದ್ಯಾಟವೂ ಆಕರ್ಷಿಸಿತು.
(ಮೊದಲ ಪುಟದಿಂದ)
ಉದ್ಘಾಟನೆ: ಕೆಸರುಗದ್ದೆ ಕ್ರೀಡಾಕೂಟವನ್ನು ಗಿಡನೆಟ್ಟು; ವಾಲಿಬಾಲ್ ಚೆಂಡಿನಿಂದ ಸರ್ವೀಸ್ ಮಾಡುವ ಮೂಲಕ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವ ಜನಾಂಗ ಫೇಸ್ಬುಕ್, ವಾಟ್ಸಾಪ್ಗಳಲ್ಲೇ ಕಾಲ ಕಳೆಯದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಯಾಂತ್ರೀಕೃತ ಕೃಷಿಗೆ ಸರ್ಕಾರ ಹತ್ತು ಸಾವಿರ ರೂ. ಸಹಾಯ ನೀಡುವಂತಾಗಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಸದಸ್ಯೆ ಕುಮುದಾ ರಶ್ಮಿ ಮಾತನಾಡಿದರು. ವೇದಿಕೆಯಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಪ್ರಮುಖ ರಾಜಶೇಖರ್, ಮೇಕೇರಿ ಗ್ರಾ.ಪಂ. ಉಪಾಧ್ಯಕ್ಷ ಭೀಮಯ್ಯ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ಮತ್ತಿತರರು ಇದ್ದರು.
ನೇತ್ರಾವತಿ ಶೋಭಾ ಪ್ರಾರ್ಥಿಸಿದರು. ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್ ದೇರಳ ಸ್ವಾಗತಿಸಿ, ಜಿಲ್ಲಾ ಯುವ ಒಕ್ಕೂಟ ಕಾರ್ಯದರ್ಶಿ ಸುಕುಮಾರ್ ವಂದಿಸಿದರು.