ವೀರಾಜಪೇಟೆ, ಆ.12: ಎಲೆ ಮರೆಕಾಯಿಯಂತಿರುವ ಪ್ರತಿಭೆಗಳನ್ನು ಹೊರತರಲು ಛದ್ಮವೇóಷ ಹಾಗೂ ನೃತ್ಯ ಸ್ಪರ್ಧೆಯ ವೇದಿಕೆ ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ವೀರಾಜಪೇಟೆ ಶಾಖೆಯ ಸಾಂಸ್ಕøತಿಕ ಸಮಿತಿ ವತಿಯಿಂದ 71ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪುರಭವನದಲ್ಲಿ ಇಂದು ಆಯೋಜಿಸಿದ್ದ ಛದ್ಮವೇಷ ಹಾಗೂ ನೃತ್ಯ ಸ್ಫರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಜೀವನ್, ವಿದ್ಯಾರ್ಥಿಗಳು ಇಂತಹ ವೇದಿಕೆಯನ್ನು ಬಳಸಿಕೊಂಡರೆ ವೇದಿಕೆ ಹತ್ತುವ ಭಯವನ್ನು ಹೋಗಲಾಡಿಸಿ ಪ್ರತಿಭಾ ಪ್ರದರ್ಶನದಲ್ಲಿ ಮುಕ್ತವಾಗಿ ಭಾಗವಹಿಸಲು ಅನುಕೂಲವಾಗಲಿದೆ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನಿಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳಿಗೆ ಪಠ್ಯ ಪುಸ್ತಕ ಹೊರತುಪಡಿಸಿದರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಲಭಿಸುವದಿಲ್ಲ. ಇಂತಹ ವೇದಿಕೆಗಳನ್ನು ಪ್ರತಿಭೆಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರ ವಿ.ಜಿ. ರಾಕೇಶ್ ಮಾತನಾಡಿ ಗಡಿನಾಡಾದ ವೀರಾಜಪೇಟೆಯಲ್ಲಿ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ವೇದಿಕೆಗಳ ಕೊರತೆ ಇರುವದರಿಂದ ಇಂತಹ ವೇದಿಕೆಗಳು ಉಪಯುಕ್ತವಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಹೋಬಳಿ ಅಧ್ಯಕ್ಷ ಮೇವಡ ಗಿರೀಶ್ ಬೋಪಣ್ಣ, ನಗರ ಅಧ್ಯಕ್ಷ ಕೀತಿಯಂಡ ಮಂಜು ಅಯ್ಯಪ್ಪ, ವೀರಾಜಪೇಟೆಯ ಸರ್ವ ಜನಾಂಗ ಸಂಘಟನೆಯ ಅಧ್ಯಕ್ಷ ಪಿ.ಎ ಮಂಜುನಾಥ್, ಲಘು ವಾಹನ ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾಜಾಜೈನ್ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಬಿ.ಎಸ್. ಚೇತನ್, ನಗರ ಸಮಿತಿ ಉಪಾಧ್ಯಕ್ಷ ಬಿ.ವಿ. ಹೇಮಂತ್, ಮನು ಮಂದಪ್ಪ, ಪಿ.ಕೆ. ರಿನೇಶ್ ಸಮಿತಿಯ ಇತರ ಸದಸ್ಯರು ಹಾಜರಿದ್ದರು.