ಕುಶಾಲನಗರ, ಆ. 12: ಕುಶಾಲನಗರದ ನಂ.19722 ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 20 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2004 ರಲ್ಲಿ ಸ್ಥಾಪನೆಯಾದ ಸಂಘ 12 ವರ್ಷ ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಕೇವಲ 138 ಮಂದಿ ಸದಸ್ಯರನ್ನೊಳಗೊಂಡು 3 ಲಕ್ಷದ 78 ಸಾವಿರ ಪಾಲು ಬಂಡವಾಳ ಹಾಗೂ 4 ಲಕ್ಷ 60 ಸಾವಿರ ದುಡಿಯುವ ಬಂಡವಾಳದೊಂದಿಗೆ ಆರಂಭವಾದ ಸಂಘದಲ್ಲಿ ಪ್ರಸ್ತುತ 999 ಸದಸ್ಯರಿದ್ದು ರೂ. 20 ಕೋಟಿ 75 ಲಕ್ಷ ದುಡಿಯುವ ಬಂಡವಾಳದೊಂದಿಗೆ 17 ಕೋಟಿ ಠೇವಣಿ ಹೊಂದಿದೆ. ಪ್ರತಿ ಸದಸ್ಯರಿಗೆ ರೂ. 20 ಲಕ್ಷದವರೆಗೆ ಸಾಲ ವಿತರಿಸಲಾಗುತ್ತಿದ್ದು, ಸದಸ್ಯರಿಗೆ ಒಟ್ಟು ರೂ. 22.5 ಕೋಟಿ ಸಾಲ ವಿತರಣೆಯಾಗಿದೆ. ಸಾಲ ವಸೂಲಾತಿಯಲ್ಲೂ ಸಂಘ ಮುಂಚೂಣಿಯಲ್ಲಿದ್ದು ಶೇ. 99.76 ರಷ್ಟು ಸಾಲ ವಸೂಲಾತಿಯಾಗಿದೆ ಎಂದು ಮಾಹಿತಿ ನೀಡಿದರು.

2016 ರಲ್ಲಿ ರೂ 2.31 ಕೋಟಿ ರೂ ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾಗಿ ಸಂಘದ ದಶಮಾನೋತ್ಸವ ಕಟ್ಟಡ ನಿರ್ಮಿಸಲಾಗಿದ್ದು ಸದಸ್ಯರಿಗೆ ಜಿಮ್, ಗ್ರಂಥಾಲಯ, ಅತಿಥಿ ಗೃಹ ವ್ಯವಸ್ಥೆ ಕಲ್ಪಿಸಲಾಗಿದ್ದು. ಆರ್.ಬಿ.ಐ ಮಾರ್ಗಸೂಚಿಯಂತೆ ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ. ಕನಿಷ್ಟ ವಾರ್ಷಿಕ ದರದಲ್ಲಿ ಅತ್ಯಂತ ಸುರಕ್ಷಿತವಾದ 1 ಸಾವಿರ ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಅವರು ಸೂಚಿಸಿದರು. ಈ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಸಂಘ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುವ ಮೂಲಕ ಫ್ರ್ರಾಂಟಿಯರ್ಸ್ ಇನ್ ಕೋ ಆಪರೇಟಿವ್ ಬ್ಯಾಂಕಿಂಗ್ ಅವಾರ್ಡ್ ಸ್ಪರ್ಧೆಯಲ್ಲಿ ವ್ಯವಹಾರಕ್ಕಾಗಿ ಗ್ರಾಹಕರನ್ನು ಆಕರ್ಷಿಸಲು ಉತ್ತಮ ಸೇವೆ ಸೌಲಭ್ಯ ನೀಡುತ್ತಿರುವ ಸಂಸ್ಥೆ ಎಂದು ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಇದರೊಂದಿಗೆ ಸಾಲ ವಸೂಲಾತಿ, ಛಾಪಾ ಕಾಗದ ಮಾರಾಟದಲ್ಲಿನ ಸಾಧನೆಗಾಗಿ ಕೊಡಮಾಡುವ ಪ್ರಶಸ್ತಿಗಳಿಗೂ ಭಾಜನವಾಗಿದೆ ಎಂದು ಅವರು ತಿಳಿಸಿದರು.

ಸಂಘದ ಸದಸ್ಯರಿಗೆ ಮರಣ ನಿಧಿ ಸೇರಿದಂತೆ ಹಸಿರು ನಿಧಿ ಸ್ಥಾಪಿಸಿ ಹಸಿರೀಕರಣಕ್ಕೆ ಆದ್ಯತೆ ನೀಡಿದೆ. ಕಳೆದ ಸಾಲಿನಲ್ಲಿ ಸಂಘ 55 ಲಕ್ಷ ರೂ ಲಾಭಗಳಿಸಿದ್ದು ಈ ಸಾಲಿನಲ್ಲಿ ರೂ 42 ಲಕ್ಷ ಲಾಭ ಗಳಿಸಿದೆ. ಈ ಪೈಕಿ ಸದಸ್ಯರಿಗೆ ಶೇ. 12 ರಷ್ಟು ಡಿವಿಡೆಂಟ್ ವಿತರಿಸಲಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಶಾಖೆಯೊಂದನ್ನು ಆರಂಭಿಸಲಾಗಿದೆ. ಭವಿಷ್ಯದಲ್ಲಿ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಗೋದಾಮು ನಿರ್ಮಾಣ ಹಾಗೂ ನಿರುದ್ಯೋಗಿಗಳು ಸ್ವಂತ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗುವಂತೆ ಕೈಗಾರಿಕಾ ಬಡಾವಣೆ ನಿರ್ಮಿಸಿ ಅಗತ್ಯ ತರಬೇತಿ ಒದಗಿಸುವ ನಿಟ್ಟಿನಲ್ಲಿ ಸಂಘ ಚಿಂತನೆ ಹರಿಸಿದೆ ಎಂದು ಶರವಣಕುಮಾರ್ ತಿಳಿಸಿದರು.

ತಾ. 20 ರಂದು ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಲಿರುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ಅವರು ಕೋರಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ರಾಜಶೇಖರ್, ಎಸ್.ಕೆ.ಮೋಹನ್‍ಕುಮಾರ್, ಕೆ.ಎಸ್.ಮಹೇಶ್, ಕವಿತ ಮೋಹನ್, ಟಿ.ಆರ್.ರೇಖಾ, ಎನ್.ಇ.ಶಿವಪ್ರಕಾಶ್, ಪ್ರಭಾರ ವ್ಯವಸ್ಥಾಪಕ ಆರ್.ರಾಜ ಇದ್ದರು.