ಗೋಣಿಕೊಪ್ಪಲು, ಆ. 11: ತಿತಿಮತಿ ಗ್ರಾ.ಪಂ ವ್ಯಾಪ್ತಿಯ ಕಲ್ತೋಡು ಗಿರಿಜನ ಕಾಲೋನಿ ನಿವಾಸಿಗಳಿಗೆ ದೊರಕಬೇಕಾದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಧ್ವನಿ ಎತ್ತಿರುವ ಅಲ್ಲಿನ ನಿವಾಸಿಗಳೊಂದಿಗೆ ಪಂಚಾಯಿತಿ ಕೂಡ ಕೈಜೋಡಿಸಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ತಿತಿಮತಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.
ಗಿರಿಜನ ಕಲೋನಿಗೆ ಭೇಟಿ ನೀಡಿ ಮಾತನಾಡಿದ ಅವರು, ಶತಮಾನ ಗಳಿಂದ ಕಾಡಿನಲ್ಲಿ ವಾಸಿಸುತ್ತಿರುವ ಇಲ್ಲಿನ ಜನರ ಭೂಮಿ ಒತ್ತುವರಿ ಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ನಿವಾಸಿಗಳು ಹೇಳಿಕೆ ನೀಡಿರುವದು ಉತ್ತಮ ಬೆಳವಣಿಗೆ. ಆದರೆ ಪಂಚಾಯಿತಿಗೆ 3 ವರ್ಷಗಳಿಂದ ಮನವಿ ನೀಡಿದ್ದೇವೆ ಎಂದಿರುವದು ಸುಳ್ಳು. ಪಂಚಾಯಿತಿ ಮಟ್ಟದಲ್ಲಿ ಕಾಲೋನಿ ಅಭಿವೃದ್ದಿ ಮಾಡುತ್ತಿದ್ದೇವೆ. ಈಗಾಗಲೇ ಅಧಾರ್ ಕಾರ್ಡ್, ಪಡಿತರ ಚೀಟಿಗಳನ್ನು ಪಂಚಾಯಿತಿ ಮಾಡಿಸಿ ಕೊಟ್ಟಿದೆ. ನಿವಾಸಿಗಳಿಗೆ ಉತ್ತಮವಾದ ಮನೆ ನಿರ್ಮಾಣ ಹಂತದಲ್ಲಿದ್ದು ಇನ್ನೂ ಕೆಲವೇ ತಿಂಗಳಿನಲ್ಲಿ ಕೆಲಸ ಮುಗಿಯಲಿದೆ. ಒಂದು ಎಕ್ರೆ ಭೂಮಿ ನೀಡಬೇಕೆಂಬ ಬೇಡಿಕೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒತ್ತುವರಿಯಾಗಿರುವ ಜಾಗ ವನ್ನು ತೆರವುಗೊಳಿಸಲು ಪ್ರ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.
ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಈ ಬಗ್ಗೆ ಈಗಾಗಲೇ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಹಾಗೂ ಖುದ್ದು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇಲ್ಲಿನ ಜನಪ್ರತಿನಿಧಿಗಳು ಕಾಲೋನಿಯ ಅಭಿವೃದ್ಧಿಗೆ ದುಡಿಯುತ್ತಿದ್ದೇವೆ ಅನುದಾನವನ್ನು ಸದ್ಬಳಕೆ ಮಾಡಿ ಕೊಂಡು ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇವೆ ಎಂದರು. ಸ್ಥಳೀಯ ನಿವಾಸಿ ಮುತ್ತ ಮಾತನಾಡಿ, ಪಂಚಾಯಿತಿ ನಮಗೆ ಯಾವದೇ ಬೆದರಿಕೆಯೊಡ್ಡಿಲ್ಲ ಜನಪ್ರತಿನಿಧಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದರು.
ಈ ಸಂದರ್ಭ ತಾ.ಪಂ ಸದಸ್ಯೆ ಆಶಾ ಜೇಮ್ಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕನಾಥ್ ಹಾಜರಿದ್ದರು.