ಸುಂಟಿಕೊಪ್ಪ, ಆ. 11: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಜಾ ದಿನವಾದ ಭಾನುವಾರ ರಾಜ್ಯ ಸರಕಾರ ಶಿಕ್ಷಣ ಇಲಾಖೆಯ ಆದೇಶದಂತೆ ಸ್ಪೋಕನ್ ಇಂಗ್ಲೀಷ್ ವಿಶೇಷ ತರಗತಿಗಳನ್ನು ನಡೆಸಲು, ಕುಶಾಲನಗರ ಪದವಿಪೂರ್ವ ಕಾಲೇಜಿಗೆ ತೆರಳಲು ಸೂಚಿಸಿರುವದಕ್ಕೆ ಪೋಷಕರು ಹಾಗೂ ಮಕ್ಕಳು ವಿರೋಧ ವ್ಯಕ್ತ ಪಡಿಸಿದ್ದಾರೆ. ವಾರದಲ್ಲಿ ಭಾನುವಾರ ಒಂದು ದಿನ ರಜೆ ಇರುತದೆ ಅದರಲ್ಲೂ ಬಡವರು ಕೂಲಿ ಕಾರ್ಮಿಕರು, ತಮ್ಮ ಮಕ್ಕಳನ್ನು ಸರಕಾರಿ ಶಾಲಾ ಕಾಲೇಜುಗಳಿಗೆ ಕಳುಹಿಸುತ್ತಾರೆ. ಸುಂಟಿಕೊಪ್ಪ ಹೋಬಳಿ ಗ್ರಾಮಾಂತರ ಪ್ರದೇಶವಾಗಿದ್ದು, ನಾಕೂರು, ಕಾನ್ಬೈಲು, ಕಂಬಿಬಾಣೆ, ಕೊಡಗರಹಳ್ಳಿ ಮತ್ತಿಕಾಡು, ಕಾರೆಕೊಲ್ಲಿ, ಹರದೂರು, ಗರಗಂದೂರು, ಕಾಂಡನಕೊಲ್ಲಿ ಈ ಗ್ರಾಮಗಳು ಸಂಪೂರ್ಣ ಗ್ರಾಮೀಣ ಪ್ರದೇಶವಾಗಿವೆ. ಈ ಭಾಗಗಳಿಗೆ ವಾಹನಗಳ ಸಂಚಾರ ವಿರಳವಾಗಿದೆ. ಬಸ್ ಸೌಕರ್ಯ ಇರುವದಿಲ್ಲ. ಕಾಡಾನೆ ಹಾವಳಿ ಹೆಚ್ಚಾಗಿರುವದರಿಂದ ಅನಾಹುತ ನಡೆದರೆ ಯಾರು ಹೊಣೆ? ಸರಕಾರದ ಉದೇಶ ಒಳ್ಳೆಯದೇ ಆದರೂ ರಜಾ ದಿನದಲ್ಲಿ ತರಬೇತಿ ನೀಡುವದು ಸರಿಯಲ್ಲ. ಶಾಲಾ ಕಾಲೇಜಿನ ಅವಧಿಯಲ್ಲೇ ಆಯಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯವರು ವಿಶೇಷ ಶಿಕ್ಷಣ ತರಬೇತಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಪೋಷಕರಾದ ಜಿ. ರಾಜನ್, ಎಂ.ಎಸ್. ರವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.