ಮಡಿಕೇರಿ, ಆ. 11: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗೋಣಿಕೊಪ್ಪಲು ಕಾವೇರಿ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮುಂಗಾರು ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ತಾ. 12 ರಂದು (ಇಂದು) ಬೆಳಗ್ಗೆ 10.30 ಗಂಟೆಗೆ ಗೋಣಿಕೊಪ್ಪದ ಕಾವೇರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಅಜ್ಜಿನಕಂಡ ಗಣಪತಿ, ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ಪ್ರೊ.ದಂಬೆಕೋಡಿ ಸುಶೀಲ ಸುಬ್ರಮಣಿರವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ವೀರಾಜಪೇಟೆ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ “ಕಾವೇರಿ ಐಸಿರಿ”, ಚುಟುಕು ರತ್ನ ಹಿರಿಯ ಸಾಹಿತಿಗಳಾದ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯರವರ “ಭಾವನೆಯಲ್ಲರಳಿದ ಪುಷ್ಪದೆಸಳುಗಳು” ಮತ್ತು “ಚುಟುಕಿನ ಸವಿಗುಟುಕು”, ಅಜ್ಜಿನಿಕಂಡ ಟಿ. ಭೀಮಯ್ಯರವರ “ಹುಬ್ಬಳ್ಳಿ ಹುಲಿ”(ಚೆಕ್ಕೇರ ಮೊಣ್ಣಯ್ಯ), ಕುಲ್ಲಚಂಡ ಚಿಪ್ಪಿ ಕಾರ್ಯಪ್ಪರವರ “ನಿರೀಕ್ಷೆ” ಕಥಾ ಸಂಕಲನ ಬಿಡುಗಡೆಗೊಳ್ಳಲಿದೆ. ಈ ಸಂದರ್ಭದಲ್ಲಿ 40ಕ್ಕೂ ಅಧಿಕ ಕವಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.